ಗುಲ್ಬರ್ಗಾ ವಿವಿಯಲ್ಲಿ ಐಎಎಸ್ ಕೋಚಿಂಗ್ ಸ್ಥಾಪನೆಗೆ ಚಿಂತನೆ :ಬಸವರಾಜ ಪಾಟೀಲ ಸೇಡಂ

ಕಲಬುರಗಿ.ಜ.4:ಮುಂದಿನ ದಿನಗಳಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ಭಾರತ ಆಡಳಿತ ಸೇವೆ (ಐಎಎಸ್)ಯ ತರಬೇತಿ ಕೇಂದ್ರ ಹಾಗೂ 5 ಎಕರೆ ಜಾಗದಲ್ಲಿ ಬೃಹತ್ ಹೇರಿಟೇಜ್ ಮ್ಯೂಸಿಯಂ ಸ್ಥಾಪನೆ ಮಾಡುವ ಚಿಂತನೆ ಇದೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕøತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ ಆಶಯ ವ್ಯಕ್ತಪಡಿಸಿದರು.
ನಗರದ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ನಡೆದ ವಿವಿಯ 41ನೇ ಸಂಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವವಿದ್ಯಾಲಯ ಹಾಗೂ ಸಿಂಡಿಕೇಟ್ ಸದಸ್ಯರು ಅನುಮತಿ ನೀಡಿದಲ್ಲಿ ಇವುಗಳ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರ ಸಹಯೋಗದಲ್ಲಿ ವಾಚನಾಲಯ ನಿರ್ಮಿಸಲಾಗಿತ್ತು. ಆದರೆ, ಸದುದ್ದೇಶದಿಂದ ನಿರ್ಮಿಸಲಾದ ವಾಚನಾಲಯ ಇಂದು ಸಂಪೂರ್ಣ ಹಾಳಾಗಿದೆ. ಇದರ ದುರಸ್ತಿಗೆ ನಮ್ಮ ಸಂಘದ ವತಿಯಿಂದ ಒಂದು ಕೋಟಿ ರೂ. ಗಳನ್ನು ನೀಡಲಾಗುವುದು ಎಂದು ಪ್ರಕಟಿಸಿದರು.
“ಕೇವಲ ನೌಕರಿಗಾಗಿ ಶಿಕ್ಷಣ ಎಂದರೆ ಅದು ಅಪಮಾನ” ಮನುಷ್ಯ ಸ್ವಯಂ ಆತ್ಮವಲೋಕನ ಮಾಡಿಕೊಳ್ಳುವುದರಿಂದ ಯಶಸ್ಸು ಲಭಿಸುತ್ತದೆ ಎಂದು ಅವರು ತಿಳಿ ಹೇಳಿದರು.
ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಚೈತನ್ಯ ಮತ್ತು ಉತ್ಸಾಹ ತುಂಬುವ ಕಾರ್ಯವಾಗಬೇಕು. ಈ ರೀತಿಯ ಶಿಕ್ಷಣ ನೀಡಿ ಭವಿಷ್ಯಕ್ಕಾಗಿ ಮಕ್ಕಳನ್ನು ಸಿದ್ದಗೊಳಿಸಬೇಕು ಎಂದು ಅವರು ಕರೆ ನೀಡಿದರು.
ಕಲ್ಯಾಣ ಕರ್ನಾಟಕದ ಭವಿಷ್ಯವನ್ನು ಬರೆಯಲು ಸ್ನಾತಕ ಮತ್ತು ಸ್ನಾತಕೋತ್ತರ ಪದವೀಧರ 175 ವಿದ್ಯಾರ್ಥಿಗಳಿಗೆ 21ದಿನಗಳ ಪ್ರಶಿಕ್ಷಣ ನೀಡಲಾಗುವುದು. ಹಾಗೂ 3 ವರ್ಷಗಳ ಕಾಲ ಖುದ್ದು ನಾನೇ ಮಾರ್ಗದರ್ಶನ ಮಾಡುತ್ತೇನೆ. ಸಂಕಟಗಳು ನಮ್ಮ ಭವಿಷ್ಯದ ಸುಂದರ ಬದುಕಿಗೆ ದಾರಿದೀಪವಾಗಲಿವೆ ಎಂದು ಅವರು ನುಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪೆÇ್ರ. ಚಂದ್ರಕಾಂತ ಎಮ್ ಯಾತನೂರು ಮಾತನಾಡಿ, ಬರುವ ದಿನಗಳಲ್ಲಿ ನ್ಯಾಕ್ ಸಮಿತಿ ಬಂದಾಗ ವಿಶ್ವವಿದ್ಯಾಲಯವನ್ನು ‘ಎ’ ಶ್ರೇಣಿಗೆ ತಲುಪಿಸುವುದು ನಮ್ಮ ಮೊದಲ ಗುರಿಯಾಗಿದೆ ಎಂದರು.
ಸರ್ಕಾರ ಮತ್ತು ಯುಜಿಸಿ(ವಿಶ್ವವಿದ್ಯಾಲಯ ಅನುದಾನ ಸಮಿತಿ)ಯಿಂದ ಹೆಚ್ಚಿನ ಅನುದಾನ ಬರುತ್ತಿಲ್ಲ ಹಾಗೂ ಖಾಲಿ ಉಳಿದಿರುವ ಶಿಕ್ಷಕರ ಹುದ್ದೆಗಳಿಗೆ ಆದಷ್ಟು ಬೇಗ ನೇಮಕಾತಿ ಮಾಡಿಕೊಳ್ಳಬೇಕು. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲು ಬಸವರಾಜ ಪಾಟೀಲ ಸೇಡಂ ಅವರಲ್ಲಿ ಮನವಿ ಮಾಡಿಕೊಂಡರು.
ಇದೇ ವೇಳೆ ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಡಾ. ಬಸವರಾಜ ಬಿ. ಯಾದವಾಡ ಅವರು ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ದೀಪಹಚ್ಚುವುದರ ಮೂಲಕ ವಿಶ್ವವಿದ್ಯಾಲಯ ತನ್ನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದೆ. 40 ವರ್ಷಗಳಿಂದ ಜ್ಞಾನದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಕೇವಲ ಪ್ರಮಾಣ ಪತ್ರ ನೀಡುವ ಸಂಸ್ಥೆಯಾಗಬಾರದು, ಸುಸಂಸ್ಕೃತ ಸಂಸ್ಕಾರ ನೀಡುವ “ಶಿಕ್ಷಣ ಶಕ್ತಿ”ಯಾಗಬೇಕು ಎಂದು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಕಾರ್ಯಕ್ರಮ ಸಂಯೋಜಕ ಪೆÇ್ರ. ಎನ್. ಬಿ. ನಡುವಿನಮನಿ ಅವರು, ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ ಸಾಮಾಜಿಕವಾಗಿ ಬದುಕಿಗೆ ಸಿದ್ದಪಡಿಸುವುದು, ವಿದ್ಯಾರ್ಥಿಗಳ ಸುಂದರ ಬದುಕು ರೂಪಿಸುವುದು ವಿವಿಯ ಧ್ಯೇಯವಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ 2019-20 ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಹಾಗೂ 2020 ನೇ ಸಾಲಿನ ನಿವೃತ್ತಿ ಹೊಂದಿರುವ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಗೌರವಿಸಲಾಯಿತು.
2019-20 ರಲ್ಲಿ ಸೌತೆಫೆಸ್ಟ್‍ನಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ಶ್ರೀಧರ ಹೊಸಮನಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.
ಕಾರ್ಯನಿರ್ವಹಣೆ ಮಾಡುವ ಸಮಯದಲ್ಲಿ ಸಾವನ್ನಪ್ಪಿದ ಮೊಹಮ್ಮದ್ ಇಬ್ರಾಹಿಂ ಅವರ ಕುಟುಂಬಕ್ಕೆ ವಿವಿಯ ಪರವಾಗಿ 2 ಲಕ್ಷ ರೂ. ಗಳ ಚೆಕ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಸದಸ್ಯರಾದ ಅಬ್ದುಲ್ ಮುಜೀಬ್, ಗಂಗಾಧರ ನಾಯಕ್, ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತನ ಸದಸ್ಯ ಪೆÇ್ರ. ಕೆ. ಶ್ರೀರಾಮುಲು ಹಾಗೂ ವಿವಿಧ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಮೌಲ್ಯಮಾಪನ ಕುಲಸಚಿವ ಪೆÇ್ರ. ಸಂಜೀವಕುಮಾರ ಕೆ. ಎಮ್ ಸ್ವಾಗತಿಸಿದರು. ವಿವಿಯ ವಿತ್ತಾಧಿಕಾರಿ ಪೆÇ್ರ. ಬಿ. ವಿಜಯ ವಂದಿಸಿದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪ್ರೊ. ಮೂಲಗೆ ಹಾಗೂ ರುದ್ರವಾಡಿ ಅವರು ಕಾರ್ಯಕ್ರಮ ನಿರೂಪಿಸಿದರು.