
ಕೋಲಾರ,ಆ,೩೧:ಗುಲಾಬಿ ಈರುಳ್ಳಿ ರಫ್ತಿಗೆ ಮತ್ತೆ ಅನುಮತಿ ನೀಡುವಂತೆ ಕೋರಿ ಸಂಸದ ಎಸ್.ಮುನಿಸ್ವಾಮಿ ನೇತೃತ್ವದ ರೈತರ ತಂಡದ ಮನವಿಗೆ ಕೇಂದ್ರ ವಾಣಿಜ್ಯ ಮತ್ತುಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸ್ಪಂದಿಸಿದ್ದು, ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರ ನೆರವಿಗೆ ಮುಂದಾಗಿದ್ದಾರೆ.
ಸಂಸದ ಎಸ್.ಮುನಿಸ್ವಾಮಿ ನೇತೃತ್ವದ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಮತ್ತು ರೈತರ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು, ಕೆಂಪು ಈರುಳ್ಳಿ ರಫ್ತಿನ ಮೇಲೆ ತೆರಿಗೆ ವಿಧಿಸಿರುವ ಕಾರಣ ಉತ್ಪಾದಕ ರೈತರಿಗೆ ತೊಂದರೆಯಾಗಿದೆ, ಬೆಲೆ ಕುಸಿತದಿಂದ ನಷ್ಟಕ್ಕೊಳಗಾಗಿದ್ದು, ಮತ್ತೆ ರಫ್ತಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಮಾತನಾಡಿ, ಕಳೆದ ಎರಡು ವರ್ಷಗಳ ಹಿಂದೆ ತಮ್ಮ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುಲಾಬಿ ಈರುಳ್ಳಿ ರಫ್ತಿಗೆ ಅನುಮತಿ ನೀಡಿದ್ದರಿಂದಾಗಿ ಪ್ರತಿ ವರ್ಷ ಸುಮಾರು ೧೦ ಸಾವಿರ ಟನ್ ಇಂಡೋನೀಷಿಯಾ, ಮಲೇಶಿಯಾ, ಥೈಲ್ಯಾಂಡ್ ಮತ್ತಿತರ ದೇಶಗಳಿಗೆ ರಫ್ತಾಗುತ್ತಿತ್ತು ಇದರಿಂದಾಗಿ ಬೆಲೆ ಕುಸಿತದ ಆತಂಕದಿಂದ ರೈತರು ಪಾರಾಗಿದ್ದರು ಎಂದು ಸಚಿವರ ಗಮನಕ್ಕೆ ತಂದರು.
ಗುಲಾಬಿ ಅಥವಾ ಕೆಂಪು ಈರುಳ್ಳಿಯನ್ನು ರಾಜ್ಯದಲ್ಲಿ ಬಳಕೆ ಮಾಡುವವರ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಇದರ ರಫ್ತಿಗೆ ಮತ್ತೆ ಅನುಮತಿ ನೀಡುವುದರಿಂದ ಈರುಳ್ಳಿ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ಅಷ್ಟಾಗಿ ಆಗದು ಎಂದು ಸಂಸದರು ತಿಳಿಸಿದರು.
ಈರುಳ್ಳಿ ಬೆಳೆಗಾರ ರೈತರ ಹಿತ ದೃಷ್ಟಿಯಿಂದ ಕೇಂದ್ರ ಸರ್ಕಾರ ಮತ್ತೆ ವರ್ಷಕ್ಕೆ ೧೦ ಸಾವಿರ ಟನ್ ರಫ್ತಿಗೆ ಅವಕಾಶ ಕಲ್ಪಿಸಬೇಕು, ರೈತರ ನೆರವಿಗೆ ಬರಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಮಾಡಿದ ಮನವಿಗೆ ಸಚಿವ ಪಿಯೂಷ್ ಗೋಯಲ್ ಸ್ಪಂದಿಸಿ ಕ್ರಮದ ಭರವಸೆ ನೀಡಿದರು.
ರಾಜ್ಯದಿಂದ ಹೋಗಿದ್ದ ನಿಯೋಗದಲ್ಲಿ ನಾಲ್ಕು ಜಿಲ್ಲೆಯ ರೈತರೊಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲೆಯ ಹಿರಿಯ ಮುಖಂಡರಾದ ಹೊಸರಾಯಪ್ಪ, ಕೆ.ಚಂದ್ರಾರೆಡ್ಡಿ ಮತ್ತಿತರರಿದ್ದರು.