ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಜೊತೆ ಸಮಿತಿಯ ಗಂಭೀರ ಚರ್ಚೆ, ಖಾಲಿ ಹುದ್ದೆಗಳ ಭರ್ತಿಗೆ ಒಂದು ವಾರದ ಗಡುವು

ಕಲಬುರಗಿ:ಡಿ.9:ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನಿಯೋಗ ನಿನ್ನೆ ಸಾಯಂಕಾಲ ಗುಲಬರ್ಗಾ ವಿವಿಗೆ ಭೇಟಿ ನೀಡಿ ವಿಶ್ವವಿದ್ಯಾಲಯದ ಕುಲಪತಿಗಳು ಸೇರಿದಂತೆ ಉನ್ನತ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಚರ್ಚಿಸಿ ಸರ್ಕಾರ ಮಂಜೂರಾತಿ ನೀಡಿರುವ ಶಿಕ್ಷಕೇತರ ಹುದ್ದೆಗಳ ಪ್ರಕ್ರಿಯೆ ಒಂದು ವಾರದಲ್ಲಿ ಪೂರ್ಣ ಗೊಳಿಸಲು ಗಡುವು ನೀಡಿ, ಒಂದು ವೇಳೆ ನೇಮಕಾತಿ ಪ್ರಕ್ರಿಯೆಯ ಪತ್ರ ವ್ಯವಹಾರ ವಾರದಲ್ಲಿ ಪೂರ್ಣ ಗೊಳ್ಳದಿದ್ದರೆ ವಿಶ್ವವಿದ್ಯಾಲಯದ ಮುಂದೆ ಹೋರಾಟ ನಡೆಸಲಾಗುವುದೆಂದು ಸಮಿತಿಯ ನಿಯೋಗ ಎಚ್ಚರಿಕೆ ನೀಡಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯ ಸೌಧದ ರಾಧಾಕೃಷ್ಣ ಸಭಾಂಗಣದಲ್ಲಿ ಸಮಿತಿಯ ನಿಯೋಗದ ಸದಸರೊಂದಿಗೆ ಕುಲಪತಿಗಳಾದ ಪ್ರೊ.ದಯಾನಂದ ಅಗಸರರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಕುಲಪತಿಗಳು ಸಮಿತಿ ವಿವಿಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ಮತ್ತು ಶೈಕ್ಷಣಿಕ ಗುಣಮಟ್ಟ ಹಾಗೂ ಆಡಳಿತಾತ್ಮಕ ಸುಧಾರಣೆಯ ಬಗ್ಗೆ ಕೇಳಿರುವ ವಿಷಯಗಳಿಗೆ ವಿವರವಾಗಿ ಉತ್ತರಿಸಿದರು.ಹೋರಾಟ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಯವರು ಮಾತ್ನಾಡಿ ವಿಶ್ವವಿದ್ಯಾಲಯದಲ್ಲಿ ಕಾಲಮಿತಿಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲು, ಶೈಕ್ಷಣಿಕ ಗುಣಮಟ್ಟ ಸುಧಾರಿಸಲು, ಪರೀಕ್ಷಾ ವಿಭಾಗದ ಪ್ರಕ್ರಿಯೆಗಳು ಪಾರದರ್ಶಕತೆ ಯಂತೆ ಕೈಗೊಳ್ಳಲು,ಪತ್ರಗಳ ವಿಲೆವಾರಿ ಸಕಾಲದಲ್ಲಿ ಕೈಗೊಳ್ಳಲು,ಅರೆ ಕಾಲಿಕ, ಗುತ್ತಿಗೆ ಆಧಾರದ, ದಿನಗೂಲಿ ನೌಕರರ ನೇಮಕಾತಿ ಮೆರಿಟ್ ಆದರದಂತೆ ಪಾರದರ್ಶಕತೆಯಮಾನದಂಡದಂತೆನಡೆಸಲು ಸೇರಿದಂತೆ ವಿವಿ ಅಭಿವೃದ್ಧಿ ವಿಷಯಗಳ ಕುರಿತು ವಿವರವಾಗಿ ವಿಷಯಗಳು ಮಂಡಿಸಿದರು.
ಕುಲಪತಿಗಳು ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳ ಮಾಹಿತಿಯನ್ನು ನೀಡಿದರು ಕಳೆದ 25 ವರ್ಷದಿಂದ ಬೋಧಕ ಹುದ್ದೆಗಳ ನೇಮಕಾತಿಯೇ ಆಗಿಲ್ಲ ಎಂದು ತಿಳಿಸಿದರು. ಅಲ್ಲದೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಯಾವುದೇ ಪ್ರಕಾರದ ಹಣಕಾಸಿನ ನೆರವು ಸರಕಾರದಿಂದ ಬಂದಿರುವುದಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಮಾತನಾಡಿದ ಪ್ರೊ. ಆರ್ ಕೆ ಹುಡುಗಿ ಅವರು ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಇದೆ ಅದನ್ನು ಸರಿಪಡಿಸಲು ಸೂಚಿಸಿದರು. ಡಾ.ಅಬ್ದುಲ್ ರಜಾಕರವರು ಬೋದಕೇತರ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರದಿಂದ ಅನುಮತಿ ಬಂದರು ವಿಶ್ವವಿದ್ಯಾಲಯ ಐದು ತಿಂಗಳಿಂದ ನೇಮಕಾತಿ ಅಧಿಸೂಚನೆಯನ್ನು ಹೊರಡಿಸದೆ ಇರುವುದಕ್ಕೆ ಕಾರಣಗಳನ್ನು ಕೇಳಿದರು.
ಡಾ. ಬಸವರಾಜ ಕುಮ್ನೂರ ಮಾತನಾಡಿ ಬೋಧಕೇತರ ಹುದ್ದೆಗಳ ನೇಮಕಾತಿಯಲ್ಲಿ ಶೇ. 50 ರಷ್ಟು ಹುದ್ದೆಗಳನ್ನು ಗುತ್ತಿಗೆ ಆಧಾರ/ ದಿನಗೂಲಿ /ಹೊರಗುತ್ತಿಗೆ ಅರೆಕಾಲಿಕವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಆದ್ಯತೆ ಕೊಡಬೇಕೆಂದು ಸೂಚಿಸಿದರು. ಅಲ್ಲದೆ ಪ್ರಸ್ತುತ ಕಾರ್ಯನಿರ್ವಹಿಸುವ ಯಾವ ಸಿಬ್ಬಂದಿಗೂ ಕೆಲಸದಿಂದ ತೆಗೆಯಬಾರದೆಂದು ಮನವಿ ಮಾಡಿದರು.
ಮುಂದುವರೆದು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕ್ರಿಯಾಯೋಜನೆಯನ್ನು ರೂಪಿಸಿ ಸರಕಾರಕ್ಕೆ ಮತ್ತು ಕೆಕೆಆರ್ ಡಿಬಿಗೆ ಸಲ್ಲಿಸಿ ಹಣಕಾಸಿನ ನೆರವನ್ನು ಪಡೆಯಲು ವಿನಂತಿಸಿದರು. ಹಿರಿಯ ಪತ್ರಕರ್ತ ಶ್ರೀನಿವಾಸ್ ಸಿರನೂರಕರ್ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ ಗಾಗಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಬೇಗನೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರಲ್ಲದೆ ವಿಶ್ವವಿದ್ಯಾಲವು ನಡೆಸುವ ಪರೀಕ್ಷೆಗಳಲ್ಲಿ ಹಾಗೂ ಮೌಲ್ಯಮಾಪಾನಗಳಲ್ಲಿ ಅಕ್ರಮಗಳು ಹೆಚ್ಚಾಗಿ ಕಂಡುಬರುತಿವೆ ಅವುಗಳನ್ನ ಸಂಪೂರ್ಣವಾಗಿ ನಿಯಂತ್ರಿಸಬೇಕು ಅಲ್ಲದೆ ಮೌಲ್ಯಮಾಪನವು ಸಹ ಕ್ರಮಬದ್ಧವಾಗಿ ನಡೆಸಿ ಸಕಾಲಕ್ಕೆ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ನೀಡಲು ಸೂಚಿಸಿದರು.
ಬಿ ಬಿ ನಾಯಕ ಮಾತ್ನಾಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಂದಮುಂಗಡ ಯಾವುದೇ ಶುಲ್ಕ ಪಡೆಯದೆ ಅವರವರ ವಿದ್ಯಾರ್ಥಿ ವೇತನ ದಲ್ಲಿ ಕಡಿತ ಮಾಡಿಕೊಳ್ಳಲು ಮನವರಿಕೆ ಮಾಡಿದರು.
ವಿವಿ ಕುಲಸಚಿವರಾದ ಡಾ.ಬಿ.ಶರಣಪ್ಪ ರವರು ಮಾತ್ನಾಡಿ ಶಿಕ್ಷಕೇತರ ಸಿಬ್ಬಂದಿ ನೇಮಕಾತಿ ಪ್ರಸ್ತಾವನೆ ಬರುವ ಸೋಮವಾರ ಸರ್ಕಾರಕ್ಕೆ ರವಾನಿಸಲಾಗುವದೆಂದು ಸಭೆಗೆ ತಿಳಿಸಿದರು.ಪರೀಕ್ಷಾ ವಿಭಾಗದ ಕುಲಸಚಿವರಾದ ಪ್ರೊ. ಜ್ಯೋತಿ ದಮ್ಮಾಪ್ರಕಾಶ ರವರು ಮಾತ್ನಾಡಿ ಪರೀಕ್ಷಾ ವಿಭಾಗದಲ್ಲಿ ಕಾಲಮಿತಿಯಲ್ಲಿ ಮತ್ತು ಪಾರದರ್ಶಕತೆಯಂತೆ ಪ್ರಕ್ರಿಯೆಗಳು ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯ ಸೌಧದ ರಾಧಾಕೃಷ್ಣ ಸಭಾಂಗಣದಲ್ಲಿ ನಡೆದ
ಈ ಸಭೆಯಲ್ಲಿ ಪ್ರಮುಖರಾದ ಮನೀಷ್ ಜಾಜು, ಡಾ.ಶ್ರಶೈಲ್ ಬಿರಾದಾರ ,ದೀಪಿಕ ಗಾಲಾ, ಡಾ.ಮಲ್ಲಿಕಾರ್ಜುನ ಶೆಟ್ಟಿ ,ಡಾ.ಗಾಂಧೀಜೀ ಮೋಳಕೇರಿ ಡಾ.ಶರಣಪ್ಪ, ಲಿಂಗರಾಜ ಸಿರಗಾಪೂರ, ಅಣ್ಣಾರಾವ ದುತ್ತುರಗಾವ್, ರಾಜೆ ಶಿವಶರಣಪ್ಪ, ಭೀಮ್ ಶೆಟ್ಟಿ ಮುಕ್ಕಾ, ಕಲ್ಯಾಣರಾವ್ ತೋನಸನಳ್ಳಿ, ಅಸ್ಲಂ ಚೌಂಗೆ,ಮುತ್ತಣ್ಣ, ಗಿರೀಶ್ ಇನಾಂದಾರ್, ಶಿವರಾಜ ಪಾಟೀಲ್,ಶಂಕರ ಕೊಡ್ಲಾ,ಬಿ ಬಿ ನಿಂಗಪ್ಪ, ಶರಣಬಸಪ್ಪ ಕೆ ,ರಾಜು ಜೈನ್, ಸೋಲೋಮನ್ ದಿವಾಕರ, ಸಂಧ್ಯಾರಾಜ ಸಾಮವೆಲ್, ಶಿವಾನಂದ ಕಾಂದೆ, ಸಾಬಿರ್ ಅಲಿ, ಮಲ್ಲಿನಾಥ ಸಂಘಶೆಟ್ಟಿ,ಅಮೀತ ಕುಮಾರ್, ಮಕ್ಬೂಲ್ ಪಟೇಲ್,ಮಹಮ್ಮದ್ ಗೌಸ್,ಪರಶುರಾಮ, ಮುನ್ನಿ ಬೇಗಂ, ಮುಮ್ತಾಜ್ ಬೇಗಂ ಸೇರಿದಂತೆ ನೂರಾರು ಜನ ಸಮಿತಿಯ ಸದಸ್ಯರು ಹಾಜರಿದ್ದರು.