ಗುರು, ಹಿರಿಯರ ಸೇವೆ ಮಾಡಿ

ಬೀದರ್:ಜ.12: ಜೀವನ ಸಾರ್ಥಕಕ್ಕೆ ಗುರು, ಹಿರಿಯರ ಸೇವೆ ಮಾಡಬೇಕು ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು ಸಲಹೆ ಮಾಡಿದರು.

ಬೀದರ್ ತಾಲ್ಲೂಕಿನ ಶ್ರೀಮಂಡಲ್ ಗ್ರಾಮದಲ್ಲಿ ನಡೆದ ಜೈ ಭವಾನಿ ಮಾತಾ ಮಂದಿರದ ದ್ವಿತೀಯ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು, ತಂದೆ-ತಾಯಿ ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡುತ್ತಾರೆ. ಹೀಗಾಗಿ ವೃದ್ಧಾಪ್ಯದಲ್ಲಿ ಮಕ್ಕಳು ಅವರಿಗೆ ಆಸರೆಯಾಗಬೇಕು. ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.

ದಯವೇ ಸಕಲ ಧರ್ಮಗಳ ತಿರುಳು ಆಗಿದೆ. ಹೀಗಾಗಿ ಕಷ್ಟದಲ್ಲಿ ಇರುವವರಿಗೆ ನೆರವಾಗಬೇಕು. ಜನ್ಮದಿನ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡುವ ಬದಲು ನಿರ್ಗತಿಕರಿಗೆ ಅನ್ನ ದಾಸೋಹ ಮಾಡಬೇಕು. ಈ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಹೇಳಿದರು.

ಸತ್ಯ, ನ್ಯಾಯ, ನೀತಿ, ಧರ್ಮದ ಮಾರ್ಗದಲ್ಲಿ ನಡೆಯಬೇಕು. ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಗ್ರಾಮದ ಮುಖಂಡರಾದ ಕಾಶೀನಾಥ ಮಹಾರಾಜವಾಡೆ, ಶಿವರಾಜ ವಡಗಾವೆ, ಶಿವಕುಮಾರ ಅಲ್ಲಂಕೆರೆ, ಪ್ರಕಾಶ ಅಲ್ಲೂರೆ, ನಾಗಶೆಟ್ಟಿ ಮಹಾರಾಜವಾಡೆ, ನಾಗಶೆಟ್ಟಿ ಪೊಲೀಸ್ ಪಾಟೀಲ, ಶರಣಪ್ಪ ಭೂಶೆಟ್ಟಿ, ರಾಜಕುಮಾರ ಮೇತ್ರೆ ಇದ್ದರು.

ಮೆರವಣಿಗೆ: ಇದಕ್ಕೂ ಮೊದಲು ಗ್ರಾಮದ ಶಿವಾಜಿ ಮಹಾರಾಜ್ ವೃತ್ತದಿಂದ ಜೈ ಭವಾನಿ ಮಾತಾ ಮಂದಿರದ ವರೆಗೆ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು.

ಕುಂಭ ಕಳಶ ಹೊತ್ತ ಮಹಿಳೆಯರು, ನಿರಗುಡಿಯ ಪೊಗರು ಡೊಳ್ಳು ಕುಣಿತ ಮೆರವಣಿಗೆಯ ಆಕರ್ಷಣೆಯಾಗಿದ್ದವು. ನೂರಾರು ಜನ ಶ್ರದ್ಧೆ, ಭಕ್ತಿಯಿಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.