ಗುರು ಹಿರಿಯರ ಆದರ್ಶ ಮಾರ್ಗದರ್ಶನವಿಲ್ಲದೆ ವ್ಯಕ್ತಿ ತನ್ನ ನಿಶ್ಚಿತ ಗುರಿ ಸಾಧಿಸಲು ಸಾಧ್ಯವಿಲ್ಲ

ಸಂಜೆವಾಣಿ ವಾರ್ತೆ
ಹನೂರು ಜು.04:- ಗುರು ಮತ್ತು ಹಿರಿಯರ ಆದರ್ಶ ಮತ್ತು ಮಾರ್ಗದರ್ಶನ ಇಲ್ಲದೆ ಯಾವುದೇ ವ್ಯಕ್ತಿ ತನ್ನ ನಿಶ್ಚಿತ ಗುರಿ ಸಾಧಿಸಲು ಸಾಧ್ಯವಿಲ್ಲ ಈ ಯಶಸ್ಸು ಅನ್ನೋದು ಮರೀಚಿಕೆಯಂತೆ. ನೀವು ಅದರ ಹಿಂದೆ ಓಡಿದಷ್ಟು ಅದು ನಿಮ್ಮಿಂದ ದೂರ ಓಡುತ್ತದೆ ಎಂದು ಸಾಲೂರು ಬೃಹನ್ಮಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಆಶೀರ್ವಚನ ನೀಡಿದರು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ವೇದಾಗಮ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮಾ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಈರೀತಿ ಹೇಳಿದ್ದು “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ” ಅಂತ. ಅಂದರೆ ಫಲದ ಅಪೇಕ್ಷೆ ಇಲ್ಲದೇ ನಿನ್ನ ಕರ್ಮ (ಕರ್ತವ್ಯ) ನೀನು ಮಾಡು.
ಮಾಡಿದ ಕೆಲಸಕ್ಕೆ ಯಶಸ್ಸು ಸಿಗಲಿ, ಜೀವನದಲ್ಲಿ ಸಫಲತೆ ಕಾಣಲಿ ಅಂತಾ ಎಲ್ಲರೂ ಬಯಸುತ್ತಾರೆ.
ಒಂದೇ ಸಮನೆ ಕೆಲಸ ಮಾಡಿದ್ರೆ ಸಾಲದು, ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿದ್ದರೆ ಆ ಕೆಲಸ ಖಂಡಿತವಾಗಿ ಯಶಸ್ವಿಯಾಗುತ್ತದೆ. ಯಾವುದೇ ಕೆಲಸದಲ್ಲಾಗಲಿ ಶ್ರಮ ಮತ್ತು ಶಿಸ್ತು ವಹಿಸಿದರೆ,ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.
ಶ್ರೀ ರಾಮಕೃಷ್ಣರು ಹೇಳುವಂತೆ ಭಗವತ್ಸಾಕ್ಷಾತ್ಕಾರಕ್ಕೆ ಭಕ್ತಿ ಹಾಗೂ ಜ್ಞಾನಗಳೆರಡೂ ಮಾರ್ಗಗಳೆನಿಸುತ್ತವೆ ಎಂಬಂತೆ ಪ್ರತಿ ಕ್ಷಣವೂ ಈ ನಾಣ್ನುಡಿಯಂತೆ ತಿಳಿಯಬೇಕು. “ರಾಮಕೃಷ್ಣರ ಭಾವಚಿತ್ರ ರಾಮಕೃಷ್ಣರನ್ನೇ ನೆನಪಿಗೆ ತರುವಂತೆ” ಪ್ರತಿಮಾಪೂಜೆಯ ಉಪಾಸನೆಯಿಂದ ಸತ್ಯದರೂಪ ಉದ್ಧೀಪನವಾಗುತ್ತದೆ
ವೈದ್ಯನ ಸಂಪರ್ಕದಿಂದಷ್ಟೇ ನಮಗೆ ಕಫದನಾಡಿ, ಪಿತ್ತದನಾಡಿಗಳ ಪರಿಚಯ ಆಗುವುದು, ಅಂತಯೇ ಯಾವದೇ ಸಾಧನಾ ಜೀವನಕ್ಕೂ ಸಿದ್ಧರಿಲ್ಲದ ಸಾಮಾನ್ಯರು ದೇವರನ್ನ ತೋರಿಸಿ ಎಂದು ಹಪ ಹಪಿಸಿದರೂ ಮಹಾತ್ಮರು ಏಕಾಏಕಿ ತೋರಿಸಲಾರರು ಅಧ್ಯಯನ ಅಧ್ಯಾಪನೆಯಿಂದಲೇ ಸತ್ಯದ ಸ್ವರೂಪನ್ನು ಅನ್ವೇಷಣೆಗಳು ಇರಿಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಗಮಪಾಠಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಕಾಲೇಜಿನ ಪ್ರಾಂಶುಪಾಲರು ಮಹದೇವಪ್ರಭುಸ್ವಾಮಿ, ಮುಖ್ಯ ಶಿಕ್ಷಕರಾದ ಶಿವಕುಮಾರ್ ಸ್ವಾಮಿ, ಕೆಂಪ ಸಿದ್ದು, ನಿವೃತ್ತ ಶಿಕ್ಷಕ ಮಾದಯ್ಯ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಮತ್ತು ಗುರುಕುಲದ ವಿದ್ಯಾರ್ಥಿಗಳು ಹಾಜರಿದ್ದರು.