
ಕಲಬುರಗಿ,ಸೆ.13:ಗುರು, ಶಿಷ್ಯರ ಮೊದಲಿನ ರೀತಿಯ ಸ್ನೇಹ ಸಂಬಂಧಗಳನ್ನು ಈಗ ಗಟ್ಟಿಗೊಳಿಸುವುದು ಅಗತ್ಯವಿದೆ ಎಂದು ಗಣಿತ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಎಂ.ಬಿ. ನಡುವಿನಮನಿ ಅವರು ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬುಧವಾರ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಗುರು ಶಿಷ್ಯರ ಮಧ್ಯ ಇದ್ದ ಸ್ನೇಹ ಸಂಬಂಧಗಳನ್ನು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಶಿಕ್ಷಕರಲ್ಲಿ ಅಂತಹ ಸಂಬಂಧಗಳು ವಿರಳವಾಗುತ್ತಿವೆ. ಅವುಗಳನ್ನು ನಾವು ಗಟ್ಟಿ ಗೊಳಿಸಬೇಕಾಗಿದೆ ಎಂದರು.
ಪ್ರಾಥಮಿಕ ಶಿಕ್ಷಣದಿಂದ ವಿಶ್ವವಿದ್ಯಾಲಯದ ಮಟ್ಟದವರೆಗೆ ಶಿಕ್ಷಕರು ಒಂದಲ್ಲ ಒಂದು ರೀತಿಯಾಗಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾರೆ. ಅವರು ಅಚ್ಚಳಿಯದೆ ಉಳಿಯುತ್ತಾರೆ ಎಂದು ಅವರು ಹೇಳಿದರು.
ಕಲಾನಿಕಾಯದ ಡೀನ್ ಡಾ. ಶ್ರೀರಾಮಲು ಅವರು ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣ ಹಾಗೂ ಸಾವಿತ್ರಿಬಾಯಿ ಫುಲೆಯವರನ್ನು ನೆನಯುತ್ತ ಅವರು ಜೀವನದಲ್ಲಿ ಹಾಕಿಕೊಟ್ಟ ಮಾರ್ಗದಿಂದ ನಾವು ಇವತ್ತಿನ ದಿನ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಶಿಕ್ಷಕರ ಪಾತ್ರ ಸಮಾಜಕ್ಕೆ ಮತ್ತು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳುವುದಕ್ಕೆ ಶಿಕ್ಷಕರ ಪಾತ್ರ ಮಹತ್ವವಾಗಿದೆ ಎಂದು ಹೇಳಿ ವಿದ್ಯಾರ್ಥಿಗಳು ಶಿಕ್ಷಕರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯಬೇಕು ಆವಾಗ ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುತ್ತವೆ ಎಂದರು.
ಸಾಹಿತಿ ಶ್ರೀಶೈಲ್ ನಾಗರಾಳ್ ಅವರು ಮಾತನಾಡಿ, ಭಾರತೀಯರಿಗೆ ಹಿಂದಿನಿಂದಲೂ ಗುರುಪರಂಪರೆ ಇತ್ತು. ಅದು ಬುದ್ಧನ ಕಾಲದಿಂದಲೂ ಗುರು ಶಿಷ್ಯರ ನಡುವಿನ ಸಂಬಂಧವನ್ನು ಕುರಿತು ಮೇಲಕು ಹಾಕಿದರು. ಬುದ್ಧನಿಂದ ಆರಂಭವಾದ ಗುರುಪರಂಪರೆ ಈಗಿನ ಕಾಲದಲ್ಲಿಯೂ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಗುರುಪರಂಪರೆ ಇತ್ತು, ಅದು ಕುವೆಂಪು ಅವರಿಗೆ ಟಿ.ಎಸ್.ವೆಂಕಣ್ಣಯ್ಯನವರು ಶ್ರೇಷ್ಠ ಗುರುಗಳಾಗಿದ್ದರು ಎಂದು ತಿಳಿಸಿದ ಅವರು, ನಮ್ಮ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಗುರುಗಳ ಪರಿಚಯ ಮಾಡುತ್ತ ಶಿಕ್ಷಕರ ಘನತೆ ಗೌರವ ಕುರಿತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಪ್ರೊ. ಎಚ್.ಟಿ. ಪೋತೆ ಅವರು ಮಾತನಾಡಿ, ಶಿಕ್ಷಕರು ಯಾವಾಗಲು ವಿದ್ಯಾರ್ಥಿಗಳ ಏಳಿಗೆಯನ್ನು ಬಯಸುತ್ತಾರೆ. ಅಕ್ಷರದವ್ವ ಸಾವಿತ್ರಿಬಾಯಿ ಪ್ರತಿಯವರು ಶಿಕ್ಷಣ ಕಲಿಯಬೇಕಾದರೆ ಅವರಿಗಾದ ಅವಮಾನ ಅಪಮಾನ ಮೀರಿ ಮುಂದುಬಂದು ಸಮಾಜ ಬದಲಾವಣೆ ಮಾಡಿದರು ಎಂದು ವಿವರಿಸಿದರು.
ಶಿಕ್ಷಕರು ಮಾತ್ರ ಗುರು ಅಲ್ಲ. ನಮ್ಮನ್ನು ಹಡೆದ ತಂದೆ ತಾಯಿಗಳು ನಿಜವಾದ ಗುರುಗಳು ಎಂದು ಹೇಳಿದ ಅವರು, ತಂದೆ ತಾಯಿಗಳು ಗುರುಗಳ ಸ್ಥಾನದಲ್ಲಿ ಇರುತ್ತಾರೆ. ನಮ್ಮ ನಡೆಯಿಂದ ಅವರ ತಲೆ ತಗ್ಗಿಸುವಂತೆ ಮಾಡಬಾರದು. ಹಾಗೆಯೆ ವಿದ್ಯಾರ್ಥಿಗಳು ಗುರುಗಳ ಜೊತೆಗೆ ತಂದೆ ತಾಯಿಗಳನ್ನು ಗೌರವಿಸಬೇಕು. ಅವರನ್ನು ಪಾಲನೆ ಪೋಷಣೆ ಮಾಡಬೇಕು ಅಂದಾಗ ವಿದ್ಯಾರ್ಥಿಗಳ ಜೀವನ ಸಾರ್ಥಕವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ಜೀವಂತ ಇಡಬೇಕಾದರೆ ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಬೇಕು. ಅಂದಾಗ ಮಾತ್ರ ಸಾಧನೆ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ, ಸಂಶೋಧಕ ವಿದ್ಯಾರ್ಥಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.