ಗುರು ಶಿಷ್ಯರು ಜೊತೆ ನಿಶ್ವಿಕಾ

ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಪ್ರತಿಭಾವಂತ ನಟಿ ನಿಶ್ವಿಕಾ ನಾಯ್ಡು ಇದೀಗ ” ಗುರು ಶಿಷ್ಯರು” ಜೊತೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರು ಪಕ್ಕಾ ಹಳ್ಳಿ ಹುಡುಗಿಯಾಗಿ‌ ಕಾಣಿಸಿಕೊಂಡಿದ್ದಾರೆ. ಸೈಕಲ್ ಗೆ ಹಾಲಿನ ಕ್ಯಾನ್ ಕಟ್ಟಿಕೊಂಡು ಬಿಂದಾಸ್ ಆಗಿ ಸೈಕಲ್ ಸವಾರಿ ಮಾಡುವ ಫೋಟೊ ಅನಾವರಣಗೊಂಡಿದೆ.

ಬರೋಬ್ಬರಿ 40 ವರ್ಷಗಳ ಹಿಂದೆ ತೆರೆಯ ಮೇಲೆ ಬಂದಿದ್ದ “ಗುರು ಶಿಷ್ಯರು” ಚಿತ್ರಕ್ಕೆ ಎಚ್ ಆರ್ ಭಾರ್ಗವ ಅವರು ಆಕ್ಣನ್ ಕಟ್ ಹೇಳಿದ್ದರು.ದ್ವಾರಕೀಶ್ ಸೇರಿದಂತೆ ಅನೇಕ‌ ನಟರು ಚಿತ್ರದಲ್ಲಿ ಮೋಡಿ ಮಾಡಿದ್ದರು. ಇದೀಗ ಅದೇ ಶೀರ್ಷಿಕೆ ಇಟ್ಟುಕೊಂಡು 1995 ರ ಕಾಲ ಘಟ್ಟದಲ್ಲಿ ಚಿತ್ರವನ್ನು ತೆರೆಯ ಮೇಲೆ ಕಟ್ಟಿಕೊಡಲು ಜಡೇಶ್ ಕುಮಾರ್ ಮುಂದಾಗಿದ್ದಾರೆ. ಶೀರ್ಷಿಕೆ ಬಿಟ್ಟರೆ ಬೇರೆ ಯಾವುದೇ ಸಾಮ್ಯತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತರುಣ್ ಸುಧೀರ್ ಮತ್ತು ನಟ ಶರಣ್ ಸಾಥ್ ನೀಡಿದ್ದಾರೆ. ಅಂದಹಾಗೆ ಇವರಿಬ್ಬರೂ ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ಶರಣ್ ನಾಯಕನಾಗಿ ಕಾಣಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಸರಿ ಸುಮಾರು 30 ಹೊಸ ಕಲಾವಿದೆಯರು, ಕನ್ನಡ ಚಿತ್ರರಂಗದ ಅನೇಕ ನಟಿಯರು, ಪರಭಾಷಾ ನಟಿಯರನ್ನು ಕೂಡ ಪರಿಗಣಿಸಿ ಕೊನೆಗೂ ಪಾತ್ರಕ್ಕೆ ಅತ್ಯಂತ ಸೂಕ್ತ ಕಲಾವಿದೆ ಎಂದು ನಿಶ್ವಿಕಾ ಅವರನ್ನು ಆಯ್ಕೆ ಮಾಡಿಕೊಂಡಿದೆ.

ಚಿತ್ರದಲ್ಲಿ ನಟ ಶರಣ್ ದೈಹಿಕ ಶಿಕ್ಷಕನಾಗಿ ಪಾತ್ರವಹಿಸುತ್ತಿದ್ದಾರೆ. ಅವರ ಜೊತೆ ನಿಶ್ವಿಕಾ ನಾಯ್ಡು ಅಪ್ಪಟ ಹಳ್ಳಿ ಹುಡುಗಿಯಾಗಿ, ರವಿಚಂದ್ರನ್ ಅಭಿಮಾನಿಯಾಗಿ, ಹಾಲಿನ ಡೈರಿ ನಡೆಸುವ ಸ್ವಯಂಕೃಷಿ ಉದ್ಯಮಿಯಾಗಿ ಪಾತ್ರ ಮಾಡಿದ್ದಾರೆ.

ಈಗಾಗಲೇ ಚಿತ್ರದ‌ ಶೇ 60 ಚಿತ್ರೀಕರಣ ಮುಗಿದಿದೆ,ಬೆಂಗಳೂರು, ಶಿವಮೊಗ್ಗ,ಮಂಡ್ಯದಲ್ಲಿ ಚಿತ್ರೀಕರಣ ಮಾಡಲಾಗಿದೆ ಉಳಿದ ಭಾಗದ ಚಿತ್ರೀಕರಣ ಸದ್ಯದ ಕೋರೋನಾ ಲಾಕ್ಡೌನ್ ಮುಗಿದ ನಂತರ ಮಾಡಲು ಚಿತ್ರತಂಡ ಮುಂದಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಟ ಶರಣ್, ನಾಯಕಿ ಆಯ್ಕೆ ಮಾಡುವ ಸ್ಕಿಟ್ ತಯಾರು ಮಾಡುವುದು ಕೂಡ ಬಹಳ ಮಜವಾದ ಕೆಲಸವಾಗಿತ್ತು. ನಿಶ್ವಿಕಾ ಅವರು ತುಂಬಾ ಒಳ್ಳೆಯ ನಟಿ. ನಮ್ಮಿಬ್ಬರ ಕಾಂಬಿನೇಷನ್ ಚಿತ್ರದಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವುದರಲ್ಲಿ ಸಂದೇಹವೇ ಇಲ್ಲ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಚಿತ್ರಕ್ಕೆ ತರುಣ್ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ.

40 ದಿನ ಬಾಕಿ

ನಟಿ ನಿಶ್ವಿಕಾ ಇದೇ ಮೊದಲ ಬಾರಿಗೆ ಒಂದು ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದು ಪ್ರೇಕ್ಷಕರಿಗೂ ಹೊಸ ಅನುಭವ ಕೊಡುವಂತ ಸನ್ನಿವೇಶಗಳು ಘಟನೆಗಳು ಚಿತ್ರದಲ್ಲಿವೆ.ಈಗಾಗಲೇ 40 ದಿನ ಚಿತ್ರೀಕರಣ ಮಾಡಲಾಗಿದ್ದು ಇನ್ನೂ 40 ದಿನಚಿತ್ರೀಕರಣ ನಡೆಯಬಹುದು .

– ಜಡೇಶ್ ಕುಮಾರ್, ನಿರ್ದೇಶಕ