ಗುರು ಭಕ್ತಿಯೇ ಭಕ್ತನಿಗೆ ಶ್ರೀ ರಕ್ಷೆ ‌:ಮುದನೂರು ಶ್ರೀ

ಕೆಂಭಾವಿ:ಎ.28:ಗುರುವಿಗೆ ಪರಮ ಭಕ್ತನಾಗಿ, ಶ್ರೀರಾಮಚಂದ್ರನಿಗೆ ತಕ್ಕ ಶಿಷ್ಯನಾಗಿ. ಗುರು-ಶಿಷ್ಯರ ಪರಂಪರೆಯನ್ನು ಸಕಲರಿಗೂ ಮಾರ್ಗವಾಗಿ ತೋರಿಸಿದಂತಹ ಕಾಯಕ ಮಾಡಿದವನು ಹನುಮಾನ ದೇವರು ಎಂದು ಮುದನೂರಿನ ಶ್ರೀ ಕೋರಿಸಿದ್ದೇಶ್ವರ ಶಾಖಾ ಮಠದ ಪೂಜ್ಯರಾದ ಷ.ಬ್ರ.ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸಮೀಪ ಶ್ರೀ ಕಂಠಿ ಹನುಮಾನ ದೇವಸ್ಥಾನದಲ್ಲಿ ಹನುಮ ಜಯಂತಿ ನೆರವೇರಿಸಿ ಮಾತನಾಡಿದ ಅವರು, ಚೈತ್ರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಶ್ರೀ ಆಂಜನೇಯ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಎಲ್ಲ ದೇವರುಗಳಲ್ಲಿ ಅತ್ಯಂತ ಬಹುಬೇಗ ಸಂತೋಷವನ್ನು ಹೊಂದುವ ಮತ್ತು ಚಿರಂಜೀವಿಯೆಂದರೆ ಹನುಮಾನ ದೇವರು. ವಿಲಕ್ಷಣಗಳ ಹೊರತಾಗಿಯೂ ವಿಜಯಶಾಲಿಯಾಗಿ ನಿಲ್ಲುವವನ್ನು ಜಯಂತಿಯ ದಿನದಂದು ಪೂಜಿಸಲಾಗುತ್ತದೆ ಎಂದು ತಿಳಿಸಿದರು.
ಪೂಜ್ಯರ ಸಾನಿಧ್ಯದಲ್ಲಿ ಶ್ರೀಕಂಠಿ ಹನುಮಾನ ದೇವರಿಗೆ ಗಂಗಾಸ್ನಾನ, ಪಂಚಾಮೃತ ಅಭಿಷೇಕ, ಸಹಸ್ರ ಹನುಮಾನ್ ನಾಮ, ತುಳಸಿ ಬಿಲ್ವಾರ್ಚನೆ ಹಾಗೂ ತೊಟ್ಟಿಲು ಸೇವೆ ನೆರವೇರಿತು. ಈ ಸಂದರ್ಭದಲ್ಲಿ ಭೀಮರಾಯ ಸಾಹು ಹೊಟ್ಟಿ, ಗೋಪಾಲರೆಡ್ಡಿ, ಗೌಡಪ್ಪಗೌಡ ರಸ್ತಾಪುರ, ರಮೇಶ ಚೌದ್ರಿ, ನಾಡಗೌಡ ಕಾಚಾಪುರ, ಮಂಜುನಾಥ ಮುದನೂರ, ಡೇವಿಡ್ ಮುದನೂರ, ವೀರೇಶರೆಡ್ಡಿ ದೇಸಾಯಿ ನಿರ್ಮಲ ಬಂಡಿ‌ ಹಾಲಭಾವಿ ನಾಗು ಸದಬ ಸೇರಿದಂತೆ ಇತರರಿದ್ದರು.