ಗುರು ಎಂದರೆ ಜ್ಞಾನದ ಬೆಳಕು, ಶಿಕ್ಷಕರನ್ನು ಗೌರವಿಸಬೇಕು : ಶಿವಬಸವ ಸ್ವಾಮೀಜಿ

ಅಥಣಿ : ಸೆ.6:ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ. ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕ ವೃತ್ತಿಯಲ್ಲ, ಅದೊಂದು ಜವಾಬ್ದಾರಿಯಾಗಿದೆ, ಭಾರತಕ್ಕೆ ಜ್ಞಾನವಂತರನ್ನು ಕೊಡುಗೆಯಾಗಿ ನೀಡುವುದು ನಮ್ಮ ಶಿಕ್ಷಕರ ಕರ್ತವ್ಯವಾಗಿದೆ. ಎಲ್ಲ ಶಿಕ್ಷಕರು ತಾಯಿಯ ಸ್ವರೂಪದ ಭಾವನೆಯಿಂದ ಮಕ್ಕಳಿಗೆ ಪಾಠ ಮಾಡಬೇಕು ಎಂದು ಹಿರಿಯ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪೂರ ಹೇಳಿದರು.
ಅವರು ಸ್ಥಳೀಯ ಗಚ್ಚಿನಮಠದ ಸಭಾಂಗಣದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕಾ ಆಡಳಿತ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಥಣಿ ಅವರು ಹಮ್ಮಿಕೊಂಡ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಭಾರತದ ಭವಿಷ್ಯದ ಬೀಜಗಳನ್ನು ಶಿಕ್ಷಕರಾದ ನಾವು ಶಾಲೆಯಲ್ಲಿ ಬಿತ್ತುತ್ತಿದ್ದೇವೆ, ಮಕ್ಕಳ ವ್ಯಕ್ತಿತ್ವದ ವಿಕಸನ ಮಾಡುವುದೇ ಶಿಕ್ಷಣ, ಅರಿವನ್ನು ಹುಟ್ಟಿಸುವವರು ಶಿಕ್ಷಕರು, ಶಿಕ್ಷಣದ ಕಟ್ಟಕಡೆಯ ಗುರಿ ಎಂದು ಕ್ರಿಯಾಶಕ್ತಿಯುಕ್ತ ದೇಶ ನಿರ್ಮಾತೃರನ್ನು ನಿರ್ಮಾಣ ಮಾಡುವುದು ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ ನಮ್ಮ ಜೀವನದಲ್ಲಿ ಹಣ ಅಧಿಕಾರ ಕಳೆದುಕೊಂಡರೆ ಪ್ರಯತ್ನ ಪರಿಶ್ರಮದಿಂದ ಮರಳಿ ಪಡೆಯಬಹುದು ಆದರೆ ವ್ಯಕ್ತಿತ್ವ ಕಳೆದುಕೊಂಡರೆ ಇಡೀ ಬದುಕನ್ನು ಕಳೆದುಕೊಂಡoತೆ. ಅಂತಹ ವ್ಯಕ್ತಿತ್ವ ನಿರ್ಮಾಣ ಮಾಡುವವರೇ ಶಿಕ್ಷಕರು. ಮಕ್ಕಳ ಬದುಕನ್ನು ವಿಕಾಸ ಮಾಡುವವನೇ ಗುರು, ಗುರು ಎಂದರೆ ಜ್ಞಾನದ ಬೆಳಕು ಅಂತಹ ಶಿಕ್ಷಕರನ್ನು ಈ ನಾಡು ಗೌರವಿಸಬೇಕು. ನಮ್ಮ ದೇಶದಲ್ಲಿ ಶಿಕ್ಷಕ, ಸೈನಿಕ, ಕೃಷಿಕ ಎಂಬುವವರು ಮೂರು ಕಣ್ಣುಗಳು ಇದ್ದಹಾಗೆ, ಶಿಕ್ಷಕರು ಇಲ್ಲದಿದ್ರೆ ಸಂಸ್ಕ್ರತಿ ನಾಶವಾಗುತ್ತದೆ ಎಂದು ಹೇಳಿದರು.
ಅಥಣಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಿ ಎಂ ಹಿರೇಮಠ ಅವರು ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ಕುರಿತು ಮಾತನಾಡಿ ಅವುಗಳಿಂದ ಶಿಕ್ಷಕರನ್ನು ಮುಕ್ತಗೊಳಿಸಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೊರಟಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ತುಕಾರಾಮ ಬಾಗೆನ್ನವರ ಮಾತನಾಡಿದರು.
ಈ ವೇಳೆ ಸೇವೆಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಶಿಕ್ಷಕಿಯರಿಗೆ ಶಿಕ್ಷಣ ಇಲಾಖೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪತಹಸಿಲ್ದಾರ ಎಂ. ಬಿ ಬಿರಾದಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ನೌಕರರ ಸಂಘದ ಅಧ್ಯಕ್ಷ ರಾಮಗೊಂಡ ಪಾಟೀಲ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷ ರೇಣುಕಾ ಬಡಕಂಬಿ, ದೈಹಿಕ ಶಿಕ್ಷಣಾಧಿಕಾರಿ ಎಂ ಆರ್ ಹಲಸಂಗಿ, ಎಸ್ ಎಂ ರಾಠೋಡ, ಬಿ ಎಲ್ ಪೂಜಾರಿ, ಜೆ ಜಿ ಪವಾರ, ಸಂಗಮೇಶ ಹಚಡದ, ಎ. ಬಿ ಕುಟಕೋಳಿ, ಎಂ ಎಚ್ ಜಮಖಂಡಿ, ಎ.ಎಸ್ ಪೂಜಾರಿ ಅನೇಕರು ಉಪಸ್ಥಿತರಿದ್ದರು. ಬಿಇಓ ಎಂ. ಬಿ ಮೋರಟಗಿ ಸ್ವಾಗತಿಸಿದರು. ಪಿ ಎಸ್ ದಳವಾಯಿ ಮತ್ತು ಎಸ್ ಪಿ ಅಥಣಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಗೌಡಪ್ಪ ಖೋತ ವಂದಿಸಿದರು.

#

ಜನಪ್ರತಿನಿಧಿಗಳೆಲ್ಲ ಗೈರು..!
ತಾಲೂಕ ಮಟ್ಟದ ಶಿಕ್ಷಕ ದಿನಾಚರಣೆಯ ಸಮಾರಂಭಕ್ಕೆ ಚುನಾಯಿತ ಜನಪ್ರತಿನಿಧಿಗಳ ಗೈರು ಎದ್ದು ಕಾಣುತ್ತಿತ್ತು. ಅದರ ಬದಲಾಗಿ ವಿವಿಧ ಶಿಕ್ಷಕರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಲಯದ ಬಹುತೇಕ ಶಾಲೆಗಳಲ್ಲಿ ತರಗತಿಗಳಿಗೆ ರಜೆ ನೀಡದೆ ಇರುವುದರಿಂದ ತಾಲೂಕ ಮಟ್ಟದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಬಹುತೇಕ ಶಿಕ್ಷಕರು ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

#

ಸಮಾಜದಲ್ಲಿ ಶಿಕ್ಷಕರಿಗೆ ವಿಶೇಷ ಸ್ಥಾನಮಾನವಿದ್ದು, ಶಿಕ್ಷಕ ವಿದ್ಯಾರ್ಥಿಗಳ ಪಾಲಿನ ನಿಜವಾದ ದೇವರು ಹಾಗೂ ಅವರ ತಂದೆ ತಾಯಿಯ ಸ್ಥಾನದಲ್ಲಿ ನಿಂತು ಅವರ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಿ ನಿಸ್ವಾರ್ಥ ಸೇವೆಯ ಮೂಲಕ ದೇಶದ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಬೇಕು ಭವಿಷ್ಯದ ಸಮಾಜ ನಿರ್ಮಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ’
ಶಿವಬಸವ ಸ್ವಾಮೀಜಿ,
ಗಚ್ಚಿನ ಮಠ ಅಥಣಿ