ಗುರು ಉಪದೇಶ ಪಾಲನೆಯಿಂದ ಬದುಕು ಹಸನು

ಬೀದರ್:ಜೂ.8: ಗುರುವಿನ ಉಪದೇಶ ಪಾಲನೆಯಿಂದ ಬದುಕು ಹಸನಾಗುತ್ತದೆ ಎಂದು ಹಲಬರ್ಗಾ, ಶಿವಣಿ ಹಾಗೂ ಹೈದರಾಬಾದ್ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ನುಡಿದರು.

ಹುಣ್ಣಿಮೆ ಪ್ರಯುಕ್ತ ಹೈದರಾಬಾದ್‍ನ ಜಿಯಾಗುಡಾದ ನಾಗಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಗುರು ಉಪದೇಶಗಳು ಬದುಕಿನಲ್ಲಿ ಬದಲಾವಣೆ ತರುತ್ತವೆ. ಕಷ್ಟ, ಕಾರ್ಪಣ್ಯಗಳಿಗೆ ಪರಿಹಾರ ಕಲ್ಪಿಸುತ್ತವೆ. ಜೀವನ ಸರಳಗೊಳಿಸುತ್ತವೆ ಎಂದು ಹೇಳಿದರು.

ಮನೆಗೊಬ್ಬರು ಹಿರಿಯರು, ಊರಿಗೊಬ್ಬರು ಗುರುಗಳು ಇರಬೇಕು ಎನ್ನುವ ಮಾತು ಬಹಳ ಅರ್ಥಪೂರ್ಣವಾಗಿದೆ. ಹಿರಿಯರು ಹಾಗೂ ಗುರುಗಳ ಮಾರ್ಗದರ್ಶನ ಎಲ್ಲರಿಗೂ ಅವಶ್ಯಕವಾಗಿದೆ ಎಂದರು.

ತಂದೆ, ತಾಯಿ, ಗುರು ಹಾಗೂ ದೇವರಿಗೆ ಸದಾ ಕೃತಜ್ಞರಾಗಿರಬೇಕು. ಈ ನಾಲ್ವರ ಕೃಪೆ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.

ಆಧುನಿಕ ಜೀವನ ಶೈಲಿಯಿಂದ ಮನುಷ್ಯ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾನೆ. ಆಧಾತ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರಿಂದ ಒತ್ತಡ ಮುಕ್ತಿ ಹೊಂದಬಹುದು. ನೆಮ್ಮದಿಯ ಬದುಕು ಸಾಗಿಸಬಹುದು ಎಂದು ತಿಳಿಸಿದರು.

ಉದ್ಯಮಿ ಬಾಬುರಾವ್ ಉದ್ಘಾಟಿಸಿದರು. ಪ್ರಮುಖರಾದ ರಾಜಕುಮಾರ ಬಿರಾದಾರ, ಶಿವಾಜಿ ಬಿರಾದಾರ, ಸಂಜು ಪಾಟೀಲ, ಜಗನ್ನಾಥ ಟೇಲರ್, ಬಾಬುರಾವ್ ಗುಡ್ಡಾ, ಶ್ರೀಕಾಂತ ಕುಡತೆ ಮೊದಲಾದವರು ಇದ್ದರು.