ಗುರು ಇಲ್ಲದೆ ಗುರಿ ಮುಟ್ಟಲು ಅಸಾಧ್ಯ

ಭಾಲ್ಕಿ:ಎ.1:ಜೀವನದ ಯಶಸ್ವಿಗೆ ಗುರಿ ಅಗತ್ಯ.ಆದರೆ ಇಟ್ಟ ಗುರಿ ತಲುಪಬೇಕಾದರೆ ಗುರುವಿನ ಮಾರ್ಗದರ್ಶನ ಅವಶ್ಯಕವಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಹೇಳಿದರು.
ಇಲ್ಲಿನ ಹೌಸಿಂಗ್ ಬೋರ್ಡ್‍ನಲ್ಲಿರುವ ಎಮ್.ಆರ್.ಎ. ಸ್ವತಂತ್ರ ಪದವಿ ಪೂರ್ವ ಕಾಲೇಜನಲ್ಲಿ ನಡೆದ ಪ್ರಸ್ತುತ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ,ಮಾತನಾಡಿದರು.
ಪಿಯು ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದೆ.ವಿದ್ಯಾರ್ಥಿಗಳು ಗುರು-ಹಿರಿಯರಿಗೆ ಗೌರವ ನೀಡಬೇಕು.ಯುವಕರು ದುಶ್ಚಟ,ದುರ್ಗುಣಗಳಿಂದ ದೂರ ಉಳಿದು ಆದರ್ಶ ಜೀವನ ರೂಪಿಸಿಕೊಳ್ಳಬೇಕು.ಹಣ,ಸಂಪತ್ತಿಗಿಂತ ಪ್ರೀತಿ,ಪ್ರೇಮ,ಸಹಬಾಳ್ವೆಯಿಂದ ಜೀವನ ಸಾಗಿಸುವ ಛಲ ಹೊಂದಬೇಕು.ವ್ಯಕ್ತಿತ್ವ ವಿಕಾಸಕ್ಕೆ ಸಂಗಾತಿಗಳು ಉತ್ತಮವಾಗಿರಬೇಕು ಎಂದು ಬಹುಮಾರ್ಮಿಕವಾಗಿ ನುಡಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಪಂಚಶೀಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಲ್.ಜಿ.ಗುಪ್ತಾ,ಮಕ್ಕಳು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ರಾಷ್ಟ್ರದ ಮಹಾನಾಯಕರ ಜೀವನ ಚರಿತ್ರೆ ತಿಳಿದುಕೊಳ್ಳುವುದು ಅಗತ್ಯವಾಗಿದೆ.ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನುರಿತ ಉಪನ್ಯಾಸಕರಿಂದ ನೀಡಲಾಗುತ್ತಿದೆ.ಮಕ್ಕಳು ಅದನ್ನು ಸದುಪಯೋಗಪಡಿಸಿಕೊಂಡು ತಮ್ಮ ಭಾವಿ ಜೀವನ ಉಜ್ವಲ ಮಾಡಿಕೊಳ್ಳಬೇಕು ಎಂದು ಶುಭಹಾರೈಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶಿವರಾಜ ಬೆಲ್ಲಾಪುರೆ ಮಾತನಾಡಿ,ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿದರೇ ವಿಷಯ ಮನದಟ್ಟಾಗುತ್ತದೆ.ವಿಜ್ಞಾನಾಧರಿತ ವಿಷಯಗಳಿಗೆ ಒತ್ತು ಕೊಡಬೇಕು ಎಂದು ತಿಳಿಸಿದರು.
ಪ್ರಾಚಾರ್ಯ ಅಶೋಕ ರಾಜೋಳೆ ಪ್ರಾಸ್ತಾವಿಕ ಮಾತನಾಡಿ,ಕೊರೊನಾ ಆತಂಕದ ಮದ್ಯೆ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಮುಗಿಸಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಬೇಕಾಗಿದೆ ಎಂದು ತಿಳಿಸಿದರು.ಪ್ರೊ.ಕೆ.ಬಿ.ಕೋಲೆ,ಮಾಧವರಾವ ಮೋರೆ,ರೇವಣಸಿದ್ಧ ಸ್ವಾಮಿ,ವಿಜಯಲಕ್ಷ್ಮೀ ಸ್ವಾಮಿ,ಕೆ.ಡಿ.ಸೋನಕಾಂಬಳೆ,ರಾಮ ರಾಠೋಡ,ಅಶೋಕ ಧಬಾಲೆ,ಶಿವರಾಜ ಗಾಯಕವಾಡ್,ರವಿ ರಾಠೋಡ,ಪ್ರಭು ಸೇರಿದಂತೆ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಭಾಗ್ಯಶ್ರೀ ರಾಜಕುಮಾರ ಭಕ್ತಿ ಗೀತೆ ನುಡಿದರೆ,ಭಾಗ್ಯಶ್ರೀ ಮತ್ತು ಅಶ್ವೀನಿ ಸ್ವಾಗತ ಗೀತೆ ಹಾಡಿದರು. ಪ್ರೊ.ಸಿ.ಬಿ.ಮಹಾಗಾವೆ ನಿರೂಪಿಸಿದರು.ಪ್ರೊ.ಆರ್.ಪಿ.ಮೋರೆ ವಂದಿಸಿದರು.