ಗುರುವಿಲ್ಲದ ಜೀವನ ನಾವಿಕನಿಲ್ಲದ ನೌಕೆಯಂತೆ: ಮಹಾರುದ್ರ ಡಾಕುಳಗಿ

ಬೀದರ: ಸೆ.6:ಗುರುವಿನಿಂದಲೇ ಸಕಲ ಮಾನವ ಜೀವರಾಶಿಯ ಅಭಿವೃದ್ಧಿ ಸಾಧ್ಯ. ತಾಯಿ ಮಗುವಿಗೆ ಜನ್ಮ ನೀಡಿದರೆ ಶಿಕ್ಷಕರು ಆ ಮಕ್ಕಳ ವ್ಯಕ್ತಿತ್ವವನ್ನು ಸರ್ವಾಂಗ ಸುಂದರವಾಗಿ ನಿರ್ಮಾಣ ಮಾಡುತ್ತಾರೆ. ಒಂದು ದೇಶದ ಅಭಿವೃದ್ದಿಯಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು ಎಂದು ಹಿರಿಯ ಸಾಹಿತಿ ಡಾ. ಎಂ.ಜಿ.ದೇಶಪಾಂಡೆ ನುಡಿದರು.

ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು ಬೆಂಗಳೂರು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಡಾ. ಕೇರ್ ಚಾರಿಟೇಬಲ್ ಟ್ರಸ್ಟ್, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ, ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರುಗಳ ಸಹಯೋಗದಲ್ಲಿ ನಗರದ ಸಮತಾ ಪ್ರೌಢ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಧನಾತ್ಮಕ ವಿಚಾರಗಳನ್ನು ಹೇಳಿಕೊಟ್ಟಾಗ ಅವರು ಮುಂದೆ ದೊಡ್ಡ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ. ತಮ್ಮ ಕುಟುಂಬದ ಜೊತೆಗೆ ದೇಶದ ಅಭಿವೃದ್ಧಿಗೆ ಕಾರಣೀಭೂತರಾಗುತ್ತಾರೆ. ಆದ್ದರಿಂದಲೇ ರಾಧಾಕೃಷ್ಣನ್ ಅವರಿಗೆ ಸ್ವತಃ ವಿದ್ಯಾರ್ಥಿಗಳೇ ಬಿಳ್ಕೊಟ್ಟು ಕಣ್ಣೀರು ಹಾಕಿದ್ದರು. ಅಂತಹ ಆದರ್ಶಗಳನ್ನು ಶಿಕ್ಷಕರು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಸುದ್ದಿಸಮಯ ಜಿಲ್ಲಾ ವರದಿಗಾರರಾದ ಮಹಾರುದ್ರ ಡಾಕುಳಗಿ ಮಾತನಾಡಿ “ಗುರುವಿಲ್ಲದ ಜೀವನ ನಾವಿಕನಿಲ್ಲದ ನೌಕೆಯಂತೆ. ಬುದ್ಧ, ಬಸವ, ಅಂಬೇಡ್ಕರ್, ಶಿವಾಜಿ ಇವರೆಲ್ಲರೂ ಗುರುವಿನ ಮಾರ್ಗದರ್ಶನದಿಂದಲೇ ಬೆಳಗಿದರು. ಕಾಡು ಕಗ್ಗಲ್ಲಾಗಿರುವ ಮಕ್ಕಳನ್ನು ಸುಂದರ ಮೂರ್ತಿಯನ್ನಾಗಿ ನಿರ್ಮಾಣ ಮಾಡುವ ಶಕ್ತಿ ಶಿಕ್ಷಕರಲ್ಲಿದೆ. ಮನೆಗಿಂತಲೂ ಬಹುತೇಕ ಸಮಯವನ್ನು ಮಕ್ಕಳು ಶಾಲೆಯಲ್ಲಿ ಕಳೆಯುತ್ತಾರೆ. ಹೀಗಾಗಿ ಶಿಕ್ಷಕರಾದವರು ಮಕ್ಕಳ ಜೊತೆ ಸ್ನೇಹಿತರಾಗಿ, ಪಾಲಕರಾಗಿ, ಜ್ಞಾನಿಗಳಾಗಿ, ವಿಶಾಲ ಹೃದಯಿಗಳಾಗಿ ಬೋಧನೆ ಮಾಡಿದಾಗ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಗುರು-ಶಿಷ್ಯರು ಪರಸ್ಪರ ಅರ್ಥಮಾಡಿಕೊಂಡಾಗ ದೇಶ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಡಾ. ಕೇರ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಸಿ. ಆನಂದರಾವ ಅವರು ಮಾತನಾಡಿ “ಇಂದಿನ ಸರ್ಕಾರಗಳು ಮಠ-ಮಂದಿರಗಳಿಗೆ ಹೆಚ್ಚು ಅನುದಾನ ನೀಡದೆ ಶಿಕ್ಷಣ ಸಂಸ್ಥೆಗಳಿಗೆ, ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಿ, ಶಾಲೆಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟರೆ ಖಂಡಿತ ಶಾಲೆಯ ಜೊತೆಗೆ ಇಡೀ ದೇಶವೇ ಏಳ್ಗೆಯಾಗುತ್ತದೆ ಎಂದರು.

ಪ್ರೌಢ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪ್ರಶಾಂತ ರಾಗಾ, ಪ್ರಗತಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ ಮಾತನಾಡಿದರು. ಸಮತಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಬಳಿರಾಮ ಕುರನಾಳೆ ಅಧ್ಯಕ್ಷತೆ ವಹಿಸಿದ್ದರು. ನ್ಯೂ ಮದರ್ ತೆರೆಸಾ ನಗರ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸಂಜೀವಕುಮಾರ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂತೋಷ ಮಂಗಳೂರೆ, ರುಬಿನಾ, ಮೋಯಿನಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು.

ಆದರ್ಶ ಶಿಕ್ಷಕರಿಗೆ ಸನ್ಮಾನ: ಇದೇ ವೇಳೆ ಶಿಕ್ಷಕ/ಶಿಕ್ಷಕಿಯರಾದ ಜಗದೇವಿ ಭೋಸ್ಲೆ, ವಿಜಯಲಕ್ಷ್ಮೀ, ನಸೀಮ್ ಸುಲ್ತಾನಾ, ಕರೀಮಾ ಸಿದ್ಧಿಕಿ, ಅನ್ನಪೂರ್ಣ, ಬಾಲಾಜಿ, ಉಮೇಶ ದುಬಲಗುಂಡಿ, ಕಲಾವತಿ, ಶಾಲಿನಿ, ಅನಿತಾ, ಸುನಿತಾ, ರೂಬಿನ್ ಅಂಜುಮ್, ಬಸವರಾಜ ಬುಯ್ಯಾ, ಸಂಜೀವಕುಮಾರ ಸ್ವಾಮಿ, ಪ್ರಶಾಂತ ರಾಗಾ, ವೈಜಿನಾಥ ಸಾಳೆ, ಅಂತೆಪ್ಪ ಬಿರಾದಾರ, ಮಂಜುನಾಥ ಬೆಳಕೇರಿ, ನವೀನಕುಮಾರ ಸೇರಿದಂತೆ ಹಲವು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.