ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠವಾದದ್ದು : ಶಾಸಕ ಮಹೇಶ ಕುಮಠಳ್ಳಿ


ಅಥಣಿ,ಸೆ.8: ಪ್ರತಿಯೊಬ್ಬರ ಜೀವನದಲ್ಲಿ ಗುರುಗಳ ಪಾತ್ರ ಮಹತ್ತರವಾಗಿದೆ. ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡುವವರೇ ನಿಜವಾದ ಗುರುಗಳು. ಗುರುವಿನ ಸ್ಥಾನ ಅತ್ಯಂತ ಶ್ರೇಷ್ಠವಾದದ್ದು, ಆ ಸ್ಥಾನದ ಘನತೆಗೆ ಅಗೌರವ ವಾಗದ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಸೇವೆ ಸಲ್ಲಿಸಬೇಕು. ಪ್ರತಿವರ್ಷ ಆಚರಿಸಲಾಗುವ ತಾಲೂಕ ಮಟ್ಟದ ಶಿಕ್ಷಕರ ದಿನಾಚರಣೆಗಾಗಿ ನಾನು ಒಂದು ಲಕ್ಷ ರೂ.ಗಳನ್ನು ದೇಣಿಗೆ ನೀಡುತ್ತೇನೆ. ತಮ್ಮ ಬಹುದಿನಗಳ ಬೇಡಿಕೆಯಾದ ಗುರು ಭವನ ನಿರ್ಮಾಣಕ್ಕಾಗಿ ಪುರಸಭೆ ವ್ಯಾಪ್ತಿಯಲ್ಲಿ ಸ್ಥಳವನ್ನು ಗುರುತಿಸಿ ಸುಂದರವಾದ ಗುರುಭವನ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹಾಗೂ ರಾಜ್ಯ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಮಹೇಶ ಕುಮಟಳ್ಳಿ ಹೇಳಿದರು.
ಅವರು ಸುಕ್ಷೇತ್ರ ಗಚ್ಚಿನಮಠದ ಸಭಾಭವನದಲ್ಲಿ ಜಿಲ್ಲಾ ಪಂಚಾಯತ, ತಾಲೂಕಾ ಆಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಥಣಿ ಅವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಶಿಕ್ಷಕರು ಹೇಳಿದಂತೆಯೇ ಮಾಡುವುದಿಲ್ಲ, ಶಿಕ್ಷಕರ ನಡುವಳೆಕೆಯನ್ನು ನೋಡಿ ಕಲಿಯುತ್ತಾರೆ. ಶಿಕ್ಷಕರು ಒಳ್ಳೆ ಆಚಾರ ವಿಚಾರಗಳನ್ನು ಬೆಳೆಸಿಕೋಳ್ಳಬೇಕು. ಶಿಕ್ಷಕರು ವೃತ್ತಿಯನ್ನು ಪ್ರಾಮಾಣಿಕ ಮತ್ತು ಪ್ರಜ್ಞಾಪೂರ್ವಕವಾಗಿ ಮಾಡುತ್ತಾ ಬಂದರೆ ವಿದ್ಯಾರ್ಥಿಗಳು ಗುರಿಯನ್ನು ಮುಟ್ಟಲು ಸಾಧ್ಯ ಎಂದು ಹೇಳಿದ ಅವರು ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರು ಹಾಗೂ ನಾನು ಕೂಡಿ ಮಾಡಿದ್ದೇವೆ. ಅಥಣಿ ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ಸ್ಥಾಪನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕಾಗಿ ಅಗತ್ಯವಿರುವ ಮತ್ತು ಶಿಥಿಲಾವಸ್ಥೆಯಲ್ಲಿರುವ ಸು. 140 ಕೋಣೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.
ಅಥಣಿ ಕ್ಷೇತ್ರಶಿಕ್ಷಣಾಧಿಕಾರಿ ಬಸವರಾಜ ತಳವಾರ ಮತ್ತು ಸಾನಿಧ್ಯ ವಹಿಸಿದ್ದ ತೆಲಸಂಗ ಹಿರೇಮಠದ ವೀರೇಶ ದೇವರು ಮಾತನಾಡಿದರು. ತಹಶೀಲ್ದಾರ ಸುರೇಶ ಮುಂಜೆ ಮಾತನಾಡಿ ಶಿಕ್ಷಕರ ಸೇವೆಯನ್ನು ಶ್ಲಾಘಿಸಿ ಶುಭಕೋರಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಮತ್ತು ಶಿಕ್ಷಕಿಯರಿಗೆ ಸನ್ಮಾನಿಸಲಾಯಿತು.
ಈ ವೇಳೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಶೇಖರ ಕರಬಸಪ್ಪಗೋಳ, ಜಿ.ಪಂ ಅಧಿಕಾರಿ ವೀರಣ್ಣ ವಾಲಿ, ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉದಯಗೌಡ ಪಾಟೀಲ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.