
ಇಂಡಿ:ಎ.12:ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ ಪವಾಡ ಪುರುಷ ಲಿಂ. ಶ್ರೀ ಸಿದ್ದಲಿಂಗ ಮಹಾರಾಜರು ಆರಂಭಿಸಿದ ಬಂಥನಾಳದ ಗುರು ಶಂಕರಲಿಂಗೇಶ್ವರ ಮಹಾರಥೋತ್ಸವ ಮಂಗಳವಾರ ಸಂಜೆ ನೆರೆದ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ಸಡಗರ ಸಂಭ್ರಮದಿಂದ ಜರುಗಿತು.
ಮಠದ ಸಂಪ್ರದಾಯದಂತೆ ಈ ಬಾರಿ ಮೂಲಾ ನಕ್ಷತ್ರದ ಮಹೂರ್ತದಲ್ಲಿ ಜರುಗಿದ ಈ ರಥೋತ್ಸವ ನೋಡಿ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಭಕ್ತರು ನದಿಗಳು ಸಾಗರವನ್ನು ಸೇರುವ ರೀತಿಯಲ್ಲಿ ಇಲ್ಲಿ ಬಂದು ಸೇರಿದ್ದರು. ಉತ್ಸವಕ್ಕೂ ಮುನ್ನ ವಾದ್ಯ ಮೇಳದೊಂದಿಗೆ ಗ್ರಾಮದ ಸುಭಾಸ್‍ಗೌಡ ಪಾಟೀಲ ಅವರ ಮನೆಯಿಂದ ರಥದ ಮೇಲೆ ಅಳವಡಿಸುವ ಕಳಶ ತಂದು ರಥಕ್ಕೆ ಅಳವಡಿಸಲಾಯಿತು. ಮತ್ತೊಂದೆಡೆ ಯುವಕರು ರಥಕ್ಕೆ ಮಾವಿನ ತೊಳಲು, ಬಾಳೆಯ ದಿಂಡು, ತೆಂಗಿನಕಾಯಿ, ಪುಷ್ಪಹಾರ ಕಟ್ಟಿ ರಥವನ್ನು ಅಲಂಕರಿಸಿ ಭಕ್ತಿ ಸಮರ್ಪಿಸಿದರು. ವಿಶೇಷವಾಗಿ ಇದೇ ಪ್ರಥಮ ಬಾರಿಗೆ ಇಲ್ಲಿನ ಕಮರಿಮಠದ ಸೇವಾ ಸಮಿತಿಯ ವತಿಯಿಂದ ರಥಕ್ಕೆ ಕೆಂಪು, ಹಸಿರು, ಹಳದಿ ಬಣ್ಣ ಬಣ್ಣದ ವಿದ್ಯುತ್ ದೀಪ ಅಳವಡಿಸಿ ರಥದ ಮೆರಗು ಹೆಚ್ಚುವಂತೆ ಮಾಡಿದ್ದರು.
ಬಳಿಕ ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ರಥದ ಮೇಲಿನ ಗುರು ಶಂಕರಲಿಂಗೇಶ್ವರ ಹಾಗೂ ಸದ್ಗುರು ಸಂಗನಬಸವೇಶ್ವರ ಮಹಾಶಿವಯೋಗಿಗಳ ಮೂರ್ತಿಗೆ ಭಕ್ತರು ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು. ಆಗಸದಲ್ಲಿನ ಭಾಸ್ಕರನು ತನ್ನ ತಾಯಿಯ ಮಡಿಲು ಸೇರುವ ಸಂದರ್ಭದಲ್ಲಿ ರಥದ ಮೇಲಿನ ಸಾಧು ಸಂತರು ಕೈಯಲ್ಲಿ ಶಲ್ಯ ಬೀಸುತ್ತಿದ್ದಂತೆ ನೆರೆದ ಸಹಸ್ರಾರು ಭಕ್ತರು ರಥಕ್ಕೆ ಅಳವಡಿಸಿದ ಹಗ್ಗವನ್ನು ಭಕ್ತಿಯಿಂದ ಹಿಡಿದು ಶರಣೋ ಶಂಕರಲಿಂಗೆಶ್ವರ ಮಹಾರಾಜ ಕೀ ಜೈ ಎಂದು ಜೈಕಾರ ಹಾಕಿ ರಥ ಎಳೆಯಲು ಆರಂಭಿಸಿದರು. ಈ ದೃಶ್ಯವನ್ನು ಕಣ್ಣಾರೆ ಕಂಡ ಸಹಸ್ರಾರು ಮಹಿಳೆಯರು, ಮಕ್ಕಳು ರಥದ ಮೇಲೆ ಖಾರಿಕ, ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ನೋಡ ನೋಡುವದರೊಳಗೆ ಆಗಸದೆತ್ತರದ, ಭ್ರಹತ್ ಗಾತ್ರದ ಕಲ್ಲಿನ ಚಕ್ರವುಳ್ಳ ರಥವು ಸರಾಗವಾಗಿ ಚಲಿಸುತ್ತಾ ಕೂಗಳತೆಯ ದೂರದ ಬಸವಣ್ಣನ ಕಟ್ಟೆ ತಲುಪಿದ ಕೂಡಲೆ ಭಕ್ತರ ಸಂಭ್ರಮ ಮುಗಿಲು ಮುಟ್ಟಿತು. ಬಳಿಕ ಮತ್ತೆ ರಥವು ಮೂಲ ಸ್ಥಳದ ಕಡೆಗೆ ಆಗಮಿಸುತ್ತಿದ್ದ ದೃಶ್ಯ ನೋಡುಗರರಲ್ಲಿ ಭಕ್ತಿ ಭಾವ ಮೂಡಿಸಿತು. ಬಳಿಕ ರಥವು ಮೂಲ ಸ್ಥಳ ತಲುಪಿದ ಬಳಿಕ ಉತ್ಸವದಲ್ಲಿ ಪಾಲ್ಗೊಂಡ ಸಹಸ್ರಾರು ಶಿಷ್ಯರು ಗುರುವಿನ ರಥಕ್ಕೆ ಭಕ್ತಿಯಿಂದ ಕೈ ಮುಗಿದು ಕೃತಾರ್ಥರಾದರು.