ಗುರುವಿನ ಮೇಲಿನ ಭಕ್ತಿ- ನಂಬಿಕೆಗೆ ಹೊಡೆತ ಬೀಳದಿರಲಿ

ಕಲಬುರಗಿ:ಮಾ.10: ಗುರುವಿನ ಮೇಲೆ ಭಕ್ತರು ನಿರೂಪಿಸುವ ಭಕ್ತಿ ಹಾಗೂ ನಂಬಿಕೆ ಎಂದಿಗೂ ಹೊಡೆತ ಬೀಳಬಾರದು. ಇವೆರಡು ಇದ್ದಲ್ಲಿ ಗುರುವಿಗೂ ಹಾಗೂ ಭಕ್ತನಿಗೂ ಜತೆಗೆ ಸಾಮಾಜಿಕವಾಗಿ ಅಭಿವೃದ್ಧಿಗೆ ಪೂರಕ ಎಂದು ಜಡೆ ಹಿರೇಮಠದ ಪೂಜ್ಯ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ನಗರದ ಸಮಧಾನದಲ್ಲಿ ಮೌನಯೋಗಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆದ ಧ್ಯಾನಮಂದಿರದ ಏಳನೇ ವಾರ್ಷಿಕೋತ್ಸವ ಹಾಗೂ ಗುರು ವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಕ್ತಿವಿದ್ದಲ್ಲಿ ನಂಬಿಕೆ ಇರುತ್ತದೆ. ಇವೆರಡು ಕೊರತೆ ಅಥವಾ ದ್ರೋಹವಾಗದಂತೆ ಮುನ್ನಡೆಯುವುದು ಇಂದಿನ ದಿನಗಳಲ್ಲಿ ಬಹಳ ಅಗತ್ಯವಿದೆ ಎಂದರು.

ಗುರುವಿನಲ್ಲಿ ನಿರ್ಲಿಪ್ತ ಭಾವನೆಯಿಂದ ಗುರು ಸೇವೆ ಸಲ್ಲಿಸಿದಾಗ ನಿಜವಾದ ಆಶೀರ್ವಾದ ದೊರಕಲು ಕಾರಣವಾಗುತ್ತದೆ ಎಂದು ಹೇಳಿದ ಅಮರೇಶ್ವರ ಶಿವಾಚಾರ್ಯರು, ನಡೆ ನುಡಿ ಒಂದಾದಲ್ಲಿ ಬೆಳವಣಿಗೆ ಹಾಗೂ ಮನಸ್ಸಿಗೆ ಸಮಧಾನ ದೊರಕುತ್ತದೆ ಎಂದು ವಿವರಣೆ ನೀಡಿದರು.

ಜೀವನದಲ್ಲಿ ಏನಾದರೂ ಪಡೆಯಬಹುದು.ಆದರೆ ಸಮಾಧಾನ ಪಡೆಯಬೇಕೆಂದರೆ ಗುರುವಿನ ಆಶೀರ್ವಾದ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ವಿವರಣೆ ನೀಡಿದರು.

ಮೌನಯೋಗಿಗಳು ಸರಳ ನಡೆ ನುಡಿಯಿಂದ ಲಕ್ಷಾಂತರ ಭಕ್ತರ ಮನ ಗೆದ್ದಿದ್ದಾರೆ. ಭಕ್ತರಾದ ತಾವೆಲ್ಲರೂ ಗುರುವಿನ ಕರುಣೆ ಹಾಗೂ ಮಹಿಮೆಯನ್ನು ಇನ್ನಷ್ಟು ವಿಸ್ತಾರ ಗೊಳಿಸಲು ತಾವು ಯತ್ನಿಸಬೇಕೆಂದರು.

ಗುರುದೇವ ಸೇವಾ ಸಂಸ್ಥೆ ವತಿಯಿಂರ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಕ್ತರಾದ ಶಿವಾನಂದ ಬಿರಾಜದಾರ, ಶಿವಶಂಕರ ಇಟಗಿ, ಶಿವಲಿಂಗಪ್ಪ ಪಾಟೀಲ್ ಮರತೂರ, ಘಾಳಪ್ಪ ಬಿರಾಜದಾರ, ಸುನೀತಾ ಗುಮ್ಮಾ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಎ.ಬಿ.ಪಾಟೀಲ್ ಬಮ್ಮನಳ್ಳಿ ನಿರೂಪಿಸಿದರು. ಶರಣು ಪಾಟೀಲ್ ವಂದಿಸಿದರು.