
ಕರಜಗಿ:ಸೆ.17:ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಮತ್ತು ಗುರುಗಳ ನಡುವೆ ಸಂಬಂಧವೇ ಇಲ್ಲದಂತಾಗಿದೆ. ಕೃತಕವಾದ ಸಂಬಂಧವೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಗುರು ಪರಂಪರೆಯನ್ನು ಹೊಂದಿರುವ ನಿಂಗದಳ್ಳಿ ಪರಿವಾರದಿಂದ ಪ್ರತಿವರ್ಷ ಎಲ್ಲಾ ಗುರುಗಳನ್ನು ಒಂದೆಡೆ ಸೇರಿಸಿ ಸ್ಮರಿಸುತ್ತಿರುವುದು ಸಂತಸ ತಂದಿದೆ ಎಂದು ಶ್ರೀ ಮುರುಳಾರಾಧ್ಯ ಶಿವಾಚಾರ್ಯರು ಹೇಳಿದರು.ತಾಲೂಕಿನ ಮಾಶಾಳ ಗ್ರಾಮದಲ್ಲಿ ನಿಂಗದಳ್ಳಿ ಪರಿವಾರದಿಂದ ಶಿಕ್ಷಕರ ದಿನಾಚರಣೆ ನಿಮಿತ್ಯ ಕ್ಲಸ್ಟರ್ ಮಟ್ಟದ ಸರ್ವ ಸೇವಾ ನಿರತ ಗುರುಗಳಿಗೆ ಗುರುವಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲಿಯವರೆಗೆ ಗುರು-ಶಿಷ್ಯರ ಸಂಬಂಧ ಉತ್ತಮವಾಗಿರುತ್ತದೆಯೋ ಅಲ್ಲಿವರೆಗೂ ನಾಡಿನಲ್ಲಿ ಘನತೆ, ಗೌರವ,ಚಿಮ್ಮುತ್ತದೆ.ಗುರುವಿಗೆ ಶಿರಬಾಗಿ ನಡೆದರೆ ಸಾಧನೆ ಮೆಟ್ಟಿಲುಗಳನ್ನು ಸುಲಭವಾಗಿ ಏರಬಹುದು.ವಿದ್ಯೆ ಕಲಿಸಿದ ಗುರುಗಳನ್ನು ದೇವರಾಗಿ ಕಾಣುವ ವಾತಾವರಣ ನಿರ್ಮಾಣ ಮಾಡುವ ಅವಶ್ಯಕತೆ ಇದೆ.ಪ್ರತಿ ವರ್ಷ ನಿಂಗದಳ್ಳಿ ಪರಿವಾರದ ಮಲ್ಲಿಕಾರ್ಜುನ ನಿಂಗದಳ್ಳಿ ಹಾಗೂ ವೈಜುನಾಥ ನಿಂಗದಳ್ಳಿ ಸೇರಿ ಇಂತಹ ಮಹತ್ವದ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯವಾಗಿದೆ.ನಮಗೆ ವಿದ್ಯೆ ಕಲಿಸಿದ ಗುರುಗಳನ್ನು ಯಾವತ್ತೂ ಮರೆಯಬಾರದು ಎಂದರು.
ಮುಖಂಡ ಮಲ್ಲಿಕಾರ್ಜುನ ನಿಂಗದಳ್ಳಿ ಮಾತನಾಡಿ,ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ.ನಮ್ಮಲ್ಲಿರುವ ಅಜ್ಞಾನವನ್ನು ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ.ಒಬ್ಬ ವಿದ್ಯಾರ್ಥಿ ತನ್ನ ಪ್ರತಿಭೆಯೊಂದರಿಂದಲೇ ಉನ್ನತಿ ಸಾಧಿಸಲು ಸಾಧ್ಯವಿಲ್ಲ, ಯಶಸ್ವಿಗೆ ಗುರುವಿನ ಮಾರ್ಗದರ್ಶನ ಅಗತ್ಯತೆ ಇದೆ.ಈ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಶ್ರೇಷ್ಠವಾಗಿದೆ.ಹೀಗಾಗಿ ಇನ್ನೂ ಮುಂದೆಯೂ ಸಹ ನಮ್ಮ ಕುಟುಂಬದಿಂದ ಅನೇಕ ರೀತಿಯಲ್ಲಿ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಕಾರ್ಯಕ್ರಮ ಮಾಡುತ್ತಾ ಬರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗುರುಗಳಾದ ಗುರು ಮಾಸ್ಟರ್, ರಾಮಚಂದ್ರ ಕುಂಬಾರ,ಗಡ್ಡಿಲಿಂಗಯ್ಯ,ರಾಜು ಪಾಯದ ಹಾಗೂ ತಾಲೂಕು ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಅಂಬಾದಾಸ ಕ್ಷತ್ರಿ,ಲತಾ ಪರಗೊಂಡ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಪ್ರಾಚಾರ್ಯ ಸಂಜೀವಕುಮಾರ ಪಾಟೀಲ್,ಪಂಚಾಕ್ಷರಿ ಪ್ಯಾಟಿ, ಮಲ್ಲಿಕಾರ್ಜುನ ಪಾರಗೊಂಡ,ದಯಾನಂದ ಲೋಣಿ, ಮಲ್ಲಿಕಾರ್ಜುನ ದಿವಟಗಿ, ಶಿವುಕುಮಾರ ಬಿರಾದಾರ,ಬಾಬಾಸಾಬ ಆಲೂರ, ವಿಶ್ವನಾಥ ರೇವೂರ, ಶಿವಪುತ್ರಪ್ಪ ಜಿಡ್ಡಗಿ, ಸಿದ್ದು ಪತಾಟೆ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ನಮಗೆ ವಿದ್ಯೆ ನೀಡಿದ ಗುರುಗಳಿಗೆ ಸ್ಮರಿಸುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗುರುವಂದನಾ ಕಾರ್ಯಕ್ರಮ ಮಾಡಲಾಗಿದೆ.ನಮ್ಮ ಬದುಕಿನಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯಂತ ಅವಶ್ಯಕವಾಗಿದೆ.ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮ್ಮ ಕುಟುಂಬ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತದೆ.
-ವೈಜುನಾಥ ನಿಂಗದಳ್ಳಿ,ಯುವ ಮುಖಂಡರು ಮಾಶಾಳ