ಗುರುವಿನ ಆರ್ಶೀವಾದದಿಂದ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ; ಚಂದ್ರಗುಂಡ ಶ್ರೀಗಳು

ಕಲಬುರಗಿ:ಜು.14:ಬುದ್ದ ಪೂರ್ಣಿಮೆ, ವ್ಯಾಸ ಪೂರ್ಣಿಮೆ, ಗುರು ಪೂರ್ಣಿಮೆ ಎಂಬ ವಿವಿಧ ನಾಮಾಂಕಿತಗಳಿಂದ ಕರೆಯಲ್ಪಡುವ ಈ ಪೂರ್ಣಿಮೆಯು ಬಹಳ ವಿಶೇಷವಾಗಿದ್ದು ಗುರುವಿನ ಮಹತ್ವವನ್ನು ಸಾರುತ್ತದೆ. ಎಲ್ಲರಿಗೂ ಗುರುವಿನ ಆರ್ಶೀವಾದ ಇರಲೇಬೇಕು ಅಂದಾಗ ಮಾತ್ರ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ. ಮನೆಯೇ ಮೊದಲ ಪಾಠಶಾಲೆಯಾಗಿ ಜನನಿ ಮೊದಲ ಗುರುವಾಗಿ, ತಂದೆ ಎರಡನೆ ಗುರುವಾಗಿ ದಾರಿ ತೊರಿಸುತ್ತಾನೆ, ಗುರುಗಳು ಶಿಸ್ತು, ಜ್ಞಾನ, ಮಾನವೀಯ ಮೌಲ್ಯಗಳನ್ನು ಸ್ವಾರ್ಥವಿಲ್ಲದೆ ಧಾರೆ ಎರೆಯುತ್ತಾರೆ. ಹಾಗಾಗಿ ಎಲ್ಲರೂ ಜೀವನಕ್ಕೆ ಬಹಳ ಮುಖ್ಯವಾಗಿದ್ದಾರೆ ಎಂದು ಕಲಬುರಗಿ ತಾಲೂಕಿನ ಹೊನ್ನ ಕಿರಣಗಿ ಗ್ರಾಮದ ಶ್ರೀ ಕರಿಬಸವೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಶ್ರೀ ಚಂದ್ರಗುಂಡ ಶಿವಾಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರಯದಲ್ಲಿ ನಡೆದ ಗುರು ಪೂರ್ಣಿಮೆಯ ಆಚರಣೆಯ ಸಂರ್ದಭದಲ್ಲಿ ಆಧ್ಯಕ್ಷತೆಯನ್ನು ವಹಿಸಿದ ಶ್ರೀಮಠದ ಪೀಠಾಧಿಪತಿಗಳಾದ ಶ್ರೀ ಚಂದ್ರಗುಂಡ ಶಿವಾಚಾರ್ಯರು ಆರ್ಶೀವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ಮಾತನಾಡಿ ಜೀವನದಲ್ಲಿ ಗುರುವಿನ ಸ್ಥಾನ ದೊಡ್ಡದು, ನಮಗೆ ಮುಂದೆ ಗುರಿಯಿದ್ದರೆ ಆ ಗುರಿ ಮುಟ್ಟಲು ಹಿಂದೆ ಬೆನ್ನೆಲುಬಾಗಿ ಗುರು ಇರಬೇಕು. ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ ಎಂದು ಆಭಿಪ್ರಾಯ ತಿಳಿಸಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವೈದಿಕ ಶಿರೋಮಣಿ ಪ್ರಶಸ್ತಿ ಪಡೆದ ಶ್ರೀ ವೇದಮೂರ್ತಿ ವಿಜಯಕುಮಾರ ಕುಡ್ಡಳ್ಳಿಮಠ ಅವರ ದಂಪತಿಗಳಿಗೆ ಶ್ರೀಮಠದ ವತಿಯಿಂದ ಸನ್ಮಾನಿಸಿದರು. ವೇದಿಕೆಯ ಮೇಲೆ ಶಿವಪುತ್ರಪ್ಪ ಹಲಚೇರಿ, ಶರಣಗೌಡ ಬಿರಾದಾರ್, ವಿಕಾಸ ಸಾಲಿಮಠ, ವೇ.ಮೂ.ಬಸವರಾಜ ಸ್ಥಾವರಮಠ, ಬಸುಗೌಡ ಬಿರಾದಾರ್, ಶಾಂತಯ್ಯ ಡೆಂಗಿಮಠ, ಆಖಂಡಪ್ಪ ಸಿರವಾಳ, ರಾಮು ಹೂಗಾರ, ಶಿವಲಿಂಗಪ್ಪ ತುಪ್ಪದ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲೆಯ
ಮುಖೋಪಾಧ್ಯಾಯರಾದ ಶರಣು ಗಂಧದಮಠ, ಸಿದ್ದಮಲ್ಲಯ್ಯ ಯಂಕಂಚಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಲಕ್ಷೀ ಬಿ ದಯಾಮಣಿ ಹಾಗೂ ವಿದ್ಯಾರ್ಥಿಗಳು, ಶ್ರೀ ಮಠದ ಭಕ್ತರು, ಗ್ರಾಮದ ಮುಖಂಡರು ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿರೇಶ ಶಾಸ್ತ್ರಿ ಸಗರ, ಪ್ರಾರ್ಥನೆ ಶ್ರೀ ಕರಿಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ಸ್ವಾಗತ ವಿಜ್ಞಾನ ಶಿಕ್ಷಕ ಅಂಬರೀಶ್ ಬಂಗಾರಶೆಟ್ಟಿ ಮತ್ತು ವಂದನಾರ್ಪಣೆ ರಾಜು ಮಠ ಅವರು ನೆರವೇರಿಸಿದರು.