
ಬೀದರ್: ಜು.19:ಗುರುವಿಗೆ ಸದಾ ಕೃತಜ್ಞರಾಗಿರಬೇಕು ಎಂದು ಕೋಲಾರದ ಶಿಕ್ಷಣ ತಜ್ಞೆ ಮಂಜುಳಾ ಭೀಮರಾವ್ ಕಿವಿಮಾತು ಹೇಳಿದರು.
ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗುರು ಪೂಜೆ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರ ಕಲಿಸಿದ ಶಿಕ್ಷಕರಷ್ಟೇ ಅಲ್ಲ; ತಂದೆ, ತಾಯಿ, ಹಿರಿಯರು ಸೇರಿದಂತೆ ಜ್ಞಾನ ಕೊಟ್ಟವರು, ಒಳ್ಳೆಯ ದಾರಿ ತೋರಿದವರು, ಮಾರ್ಗದರ್ಶನ ಮಾಡಿದವರೂ ಗುರುಗಳೇ ಎಂದು ಹೇಳಿದರು.
ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ ಇದೆ. ವಿದ್ಯೆ, ಬುದ್ಧಿ, ಆಚಾರ, ವಿಚಾರ ಕಲಿಸಿದ ಗುರುವನ್ನು ಎಲ್ಲರೂ ಗೌರವಿಸಬೇಕಿದೆ ಎಂದು ತಿಳಿಸಿದರು.
ದೇಶದಲ್ಲಿ ವ್ಯಾಸರ ಜನ್ಮದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸುತ್ತ ಬರಲಾಗುತ್ತಿದೆ. ವ್ಯಾಸರು ಜ್ಞಾನದ ರಾಶಿಯನ್ನು ನಾಲ್ಕು ವೇದಗಳಲ್ಲಿ ವಿಂಗಡಿಸಿದ್ದರು. ವಿಘ್ನ ನಿವಾರಕನ ಮೂಲಕ ಅವರು 24 ಲಕ್ಷ ಶ್ಲೋಕಗಳನ್ನು ಬರೆಸಿದ್ದರು. ರಾಮಾಯಣ, ಮಹಾಭಾರತ ಮಹಾಕಾವ್ಯಗಳಲ್ಲಿ ಅವರ ಶ್ಲೋಕಗಳನ್ನು ಕಾಣಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಶಾಲೆಯಲ್ಲಿ ಭಾರತೀಯ ಸಂಸ್ಕøತಿ ಆಧಾರಿತ ಶಿಕ್ಷಣ ಕೊಡಲಾಗುತ್ತಿದೆ. ವಿದ್ಯೆ ಜತೆಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಲು ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಶಿವಾನಂದ ಮಲ್ಲ ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರಶಾಂತ ಸ್ವಾಗತಿಸಿದರು. ಅಮೂಲ್ಯ ಸ್ವಾಮಿ ನಿರೂಪಿಸಿದರು. ಸಮರ್ಥ ವಂದಿಸಿದರು. ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.