ಗುರುವಿಗೆ ಇರುವ ಸ್ಥಾನಮಾನ ಗೌರವ ಮತ್ತೊಂದು ಪದವಿಗೆ ಇಲ್ಲ : ಶ್ರೀಮಂತ ಪಾಟೀಲ

ಕಾಗವಾಡ :ಸೆ.6: ಇಂದಿನ ಸಮಾಜದಲ್ಲಿ ಆಯ್.ಎ.ಎಸ್, ಮತ್ತು ಆಯ್.ಪಿ.ಎಸ್. ಆಫೀಸ್‍ರ, ವೈದ್ಯರು, ಅಭಿಯಂತರರು ಮೊದಲಾದ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳನ್ನು ನಿರ್ಮಾಣ ಮಾಡಲು ಶಿಕ್ಷಣ ನೀಡಿದ ಗುರುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಜಗತ್ತಿನಲ್ಲಿ ಗುರುವಿಗೆ ಇರುವ ಸ್ಥಾನ, ಮಾನ, ಗೌರವ ಮತ್ತೊಂದು ಪದವಿಗೆ ಇಲ್ಲ ಗುರುವಿನ ಸ್ಥಾನ ಅಷ್ಟೊಂದು ಪವಿತ್ರವಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ಅವರು ಸೋಮವಾರ ದಿ. 5 ರಂದು ಉಗಾರ ಖುರ್ದ ಪಟ್ಟಣದ ಜೈನ ಸಮಾಜ ಮಂದಿರದ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ ಇವುಗಳ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಲಾಗಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ. ಶಿಕ್ಷಕರ ದಿನಾಚರಣೆಯ ದಿನವಾದ ಇಂದು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಅವರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರಿಬ್ಬರ ಆದರ್ಶ ಗುಣಗಳನ್ನು ಪ್ರತಿಯೊಬ್ಬ ಶಿಕ್ಷಕರು ಅಳವಡಿಸಿಕೊಂಡಾಗ ಅವರ ಜೀವನ ಪಾವನವಾಗುವುದೆಂದು ಹೇಳಿದರು.
ಕರ್ನಾಟಕ ರಾಜ್ಯ ನೌಕರರ ಸಂಘದ ಬೇಡಿಕೆಯಂತೆ ಕಾಗವಾಡದಲ್ಲಿ ನೌಕರರ ಭವನ ನಿರ್ಮಾಣಕ್ಕೆ ತಮ್ಮ ಶಾಸಕರ ನಿಧಿನಿಂದ 20 ಲಕ್ಷ ರೂ. ನೀಡುವುದಾಗಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಹೇಳಿದರು.
ಉಗಾರ ಖುರ್ದದ ಮಲ್ಲಿಕಾರ್ಜುನ ಗುರುದೇವಾಶ್ರಮದ ಪ.ಪೂ. ಶ್ರೀ ಬಸವಲಿಂಗ ಸ್ವಾಮಿಜಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ, ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಮುಂಜೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಅಮೂಲ್ಯವಾಗಿದೆ. ಜನ್ಮ ನೀಡಿದ ತಂದೆ ತಾಯಿಯ ಋಣ, ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ. ಸಮಾಜದಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಮತ್ಯಾರಿಗೂ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಅಕ್ಷರದ ಅವ್ವ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ದೀಪ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಕಾಗವಾಡ ವಲಯದ ನಿವೃತ್ತ ಶಿಕ್ಷಕರ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೀರನಗೌಡ ಏಗನಗೌಡರ, ದೈಹಿಕ ಪರೀವಿಕ್ಷಕ ಎಂ.ವಾಯ್. ಪೂಜಾರಿ, ಕ್ಷೇತ್ರ ಸಮನ್ವಯಾಧಿಕಾರಿ ರವೀಂದ್ರ ಖಡಾಖಡಿ, ಶಿಕ್ಷಣ ಸಂಯೋಜನಾಧಿಕಾರಿ ಬಿ.ಎಸ್.ಪಾಟೀಲ, ಸಿಡಿಪಿಓ ಸಂಜೀವಕುಮಾರ ಸದಲಗಿ, ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ಕೆ.ಟಿ.ಕಾಂಬಳೆ, ಜೆ.ಎಂ.ಸಡ್ಡಿ, ಬಿ.ಎ.ಕಾಂಬಳೆ, ಎಂ.ಜಿ. ಸಂಕಪಾಳ, ಸಂಜೀವ ಕೋಳಿ, ಎ.ಡಿ.ಖಾತೇದಾರ,ಎಲ್.ವಾಯ್.ಚೌಗಲೆಬಿ.ಎಸ್.ಯರಂಡೋಲಿ. ಶಶಿಕಾಂತ ಭೈರಗೊಂಡ. ಸೇರಿದಂತೆ ಎಲ್ಲ ಶಿಕ್ಷಕ ಸಂಘಗಳ ಅಧ್ಯಕ್ಷರು. ಸದಸ್ಯರು. ಶಿಕ್ಷಕವೃಂದ, ಸಿಬ್ಬಂದಿ ವರ್ಗ ಅಪಾರ ಸಂಖ್ಯೆಯಲ್ಲಿ ಇದ್ದರು.