ಗುರುವಾಪುರ ಪ್ರೌಢಶಾಲೆಯಲ್ಲಿ ವಿಜ್ಞಾನ ದಿನಾಚರಣೆ

ಹುಳಿಯಾರು, ಮಾ. ೫- ಖ್ಯಾತ ವಿಜ್ಞಾನಿ ಸರ್.ಸಿ.ವಿ.ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ಸಂದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹುಳಿಯಾರು ಸಮೀಪದ ಗಾಣಧಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುವಾಪುರದ ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯಲ್ಲಿಯೂ ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಸರ್.ಸಿ.ವಿ.ರಾಮನ್ ರವರ ಜೀವನ ಚರಿತ್ರೆ, ಅವರ ವೈಜ್ಞಾನಿಕ ಸಾಧನೆಗಳು, ಅವರ ಸಂಶೋಧನೆಯ ನಂತರದ ಕೈಗಾರಿಕಾ ಬೆಳವಣಿಗೆ, ರಾಮನ್ ಸಂದ ಪ್ರಶಸ್ತಿಗಳು ಮತ್ತು ಗೌರವಗಳು, ರಾಮನ್ ಇನ್ಸಿಟ್ಯೂಟ್ ಸ್ಥಾಪನೆ ಕುರಿತು ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ವಿಜ್ಞಾನ-ತಂತ್ರಜ್ಞಾನದಿಂದ ಮನುಷ್ಯನ ತಿಳುವಳಿಕೆ ಹೆಚ್ಚಾಗಿದೆ, ಜಗತ್ತನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಿದೆ, ಸಕಲ ಸೌಲಭ್ಯ ಪಡೆಯಲು ಸಂಶೋಧನೆಗಳಾಗಿವೆ ಎಂದು ವಿದ್ಯಾರ್ಥಿಗಳಿಗೆ ಸಂವಾದದ ಮೂಲಕ ತಿಳಿಸಿ, ವಿಜ್ಞಾನದ ಅರಿವಿನಿಂದ ಪವಾಡ ರಹಸ್ಯ ಬಯಲು ಮಾಡುವುದನ್ನು, ವಿಜ್ಞಾನ ಗ್ರಹಿಕೆಯಿಂದ ನಿಸರ್ಗವನ್ನು ಅರ್ಥಮಾಡಿಕೊಳ್ಳುವುದನ್ನು ಮತ್ತು ಶಾಲಾ ಕಲಿಕೆಯ ಪ್ರಯೋಗಗಳಿಂದ ಸುತ್ತಲೂ ನಡೆಯುವ ಘಟನೆಗಳ ಬಗ್ಗೆ ವಿವರಿಸುವುದನ್ನು ರಸಪ್ರಶ್ನೆ ಮೂಲಕ ಸುವರ್ಣ ವಿದ್ಯಾ ಚೇತನದ ಅಧ್ಯಕ್ಷ ರಾಮಕೃಷ್ಣಪ್ಪ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಯೋಗೀಶ್, ಶಿಕ್ಷಕರಾದ ದಕ್ಷಿಣಮೂರ್ತಿ, ಜಯಮ್ಮ, ಪುಟ್ಟಾನಾಯಕ್, ಚಿಕ್ಕರಿಯಪ್ಪ, ಸಿದ್ದರಾಜು, ನಂದೀಶ್ ಮತ್ತಿತರರು ಉಪಸ್ಥಿತರಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ಲಕ್ಷ್ಮಿ.ಆರ್, ಹೇಮಲತಾ, ಪೂರ್ವಿಕಾ, ರಚನ ಮತ್ತು ಚೇತನ್ ರವರಿಗೆ ವಿಶ್ರಾಂತ ಪ್ರಾಚಾರ್ಯರಾದ ಯು.ಪಿ.ಉಮಾದೇವಿ ಮತ್ತು ಸೃಜನ ಸಂಘಟನೆಯ ಖಜಾಂಚಿ ರಾಜಮ್ಮ ಬಹುಮಾನ ವಿತರಿಸಿದರು.