ಗುರುವಂದನೆ, ಸ್ನೇಹ ಸಮ್ಮಿಲನ


ಅಣ್ಣಿಗೇರಿ,ಮಾ.5: ತಾವು ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಗುರ್ತಿಸಿ ಅವರಿಗೆ ಗುರುವಂದನೆಯ ಮೂಲಕ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಉಪನಿರ್ದೆಶಕ ಎಸ್.ಎಸ್.ಕೆಳದಿಮಠ ಹೇಳಿದರು.
ಅವರು ತಾಲೂಕಿನ ನಲವಡಿ ಗ್ರಾಮದ ವೇ.ರಾ.ಪಾಟೀಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಸನ್ 1999-2000ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಲವು ವರ್ಷಗಳ ನಂತರ ಅಂದು ವಿದ್ಯೆಕೊಟ್ಟ ಗುರುಗಳನ್ನು ನೆನಪಿನಲ್ಲಿಟ್ಟುಕೊಂಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಿವೃತ್ತ ಶಿಕ್ಷಕ ವ್ಹಿ.ಎ.ಸಜ್ಜನ ಮಾತನಾಡಿ, ವಿದ್ಯಾರ್ಥಿಗಳೇ ನಮ್ಮ ಆಸ್ತಿ, ಅಂದು ಅವರಿಗೆ ಕೊಟ್ಟ ವಿದ್ಯೆ ಇಂದು ಹೆಮ್ಮರವಾಗಿ ಬೆಳೆದು ಸಮಾಜಕ್ಕೆ ಉತ್ತಮವಾದ ಕೊಡುಗೆಯನ್ನು ನೀಡುತ್ತಿರುವುದು ನಮ್ಮೆಲ್ಲ ಗುರುಬಳಗಕ್ಕೆ ಸಂತಸವಾಗಿದೆ. ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಸಂತಸ ತಂದಿದೆ ಎಂದರು.
2000ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಕಲಿತ ವಿದ್ಯಾರ್ಥಿನಿ ರಾಧಾ.ಬಿ.ಕೆ ಮಾತನಾಡಿ, ನಾವು ಕಲಿತ ಶಿಕ್ಷಣ ಸಂಸ್ಥೆ ಹಾಗೂ ಕಲಿಸಿದ ಶಿಕ್ಷಕರು ಇಂದಿಗೂ ನಮಗೆ ಮಾರ್ಗದರ್ಶಕರಾಗಿದ್ದಾರೆ. ಶಿಕ್ಷಕಕರು ಸಮಾಜದ ಶಿಲ್ಪಿಗಳಿದ್ದಂತೆ. ವಿದ್ಯಾರ್ಥಿ ಜೀವನದಲ್ಲಿ ನಮಗೆ ಉತ್ತಮ ಶಿಕ್ಷಣ ಹಾಗೂ ಸೂಕ್ತ ಮಾರ್ಗದರ್ಶನ ನೀಡಿದ್ದರಿಂದಲೇ ಇಂದು ನಾವು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸುತ್ತಿದ್ದೇವೆ ಎಂದರು.
ವಿದ್ಯಾರ್ಥಿ ಪ್ರಕಾಶ ಚಕಾರಿ ಮಾತನಾಡಿ, ಉತ್ತಮವಾದ ಗುಣಮಟ್ಟದ ಶಿಕ್ಷಣವನ್ನು ನೀಡುವದರೊಂದಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟ ಎಲ್ಲ ಗುರುವೃಂದಕ್ಕೆ ಸ್ನೇಹ ಬಳಗದ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.
ಗುರುವೃಂದವನ್ನು ಪುಷ್ಪಗಳ ಸುರಿಮಳೆಯಿಂದ ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆಯಿತು.
ನಿವೃತ್ತ ಶಿಕ್ಷಕರಾದ ಜೆ.ಎ.ಭಾವಿಕಟ್ಟಿ, ಕೆ.ಪಿ.ಗುರಿಕಾರ, ದೇವಿಕಾ ಉಮಚಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಂ.ಎಚ್.ಮರಿಗೌಡರ, ಎಸ್.ವಿ.ಗುರುಶಾಂತನವರ, ಎಚ್.ಎ.ಡಾಲಾಯತ, ಎಂ.ಡಿ.ಕುರಹಟ್ಟಿ, ಎಸ್.ಎ.ಕುಲಕರ್ಣಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ದೇವಮ್ಮ ಉಮಚಗಿ ನಿರ್ವಹಿಸಿದರು.