ಗುರುವಂದನಾ, ಸ್ನೇಹ ಸಮ್ಮಿಲನ

(ಸಂಜೆವಾಣಿ ವಾರ್ತೆ)
ನವಲಗುಂದ,ಫೆ13 : ವಿಧಾನಸಭಾ ಕ್ಷೇತ್ರದ ಹೇಬಸೂರ್ ಗ್ರಾಮದ ಸೆಕೆಂಡರಿ ಸ್ಕೂಲಿನ 1994-95 ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ನಡೆಯಿತು.

ಅರ್ಥಪೂರ್ಣವಾಗಿ ನಡೆದ ಗುರು-ಶಿಷ್ಯರ ಈ ಸಮಾಗಮದಿಂದ ಶಾಲೆ ಆವರಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಹಳೆಯ ವಿದ್ಯಾರ್ಥಿಗಳು ಶಾಲಾ ಆವರಣಕ್ಕೆ ಆಗಮಿಸಿದ ಶಿಕ್ಷಕರ ಪಾದಕ್ಕೆ ನಮಸ್ಕರಿಸಿ ಬರಮಾಡಿಕೊಂಡರು.

ಸ್ನೇಹಿತರೆಲ್ಲ ಪರಸ್ಪರ ಕ್ಷೇಮ, ಕುಶಲೋಪರಿ ವಿಚಾರಿಸಿ ಶಾಲಾ ದಿನಗಳ ನೆನಪಿನಂಗಳಕ್ಕೆ ಜಾರಿದರು. ನೆಚ್ಚಿನ ಶಿಕ್ಷಕರಿಗೆ ಹೂಮಳೆ ಸುರಿಸಿ ಮುಖ್ಯ ವೇದಿಕೆಗೆ ಕರೆತರುತ್ತಿದ್ದ ದೃಶ್ಯ ಗಮನ ಸೆಳೆಯಿತು.

ಒಂದನೇ ತರಗತಿಯಿಂದ.. ಎಸ್ ಎಸ್ ಎಲ್ ವರೆಗೆ ಕಲಿಸಿದ ಎಲ್ಲ ಶಿಕ್ಷಕರನ್ನು ಹಾಗೂ ಶಾಲಾ ಕಮಿಟಿ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಂದಿನ ವಿದ್ಯಾರ್ಥಿಗಳಾದ ಚನ್ನು ಮರಿಗೌಡ್ರು. ಸುರೇಶ್ ಹಡಪದ್. ಮಂಜುನಾಥ್ ಹೊಸಮನಿ, ಉಮೇಶ್ ಅಸುಂಡಿ, ಪ್ರಿಯಾ ಅಕ್ಕಿ. ಶೋಭಾ ಕಮಡೊಳ್ಳಿ ಸೇರಿದಂತೆ 1994-95 ನೇ ಸಾಲಿನ ಎಲ್ಲ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.