ಗುರುವಂದನಾ ಕಾರ್ಯಕ್ರಮ

ನರೇಗಲ್ಲ,ಮಾ 14: ನಮ್ಮನ್ನು ಹೆತ್ತ ತಂದೆ-ತಾಯಿಗಳು ನಮ್ಮ ಮೊದಲನೆ ತಂದೆ-ತಾಯಿಗಳು. ಆದರೆ ನಮಗೆ ಶಿಕ್ಷಣವನ್ನು ನೀಡಿ, ತಮ್ಮ ಮಕ್ಕಳಂತೆ ನಮ್ಮನ್ನು ಕಂಡು ನಮಗೆ ಬದುಕಿನ ಪಾಠ ಹೇಳಿಕೊಡುವ ಪ್ರತಿ ಗುರುವೂ ನಮಗೆ ಎರಡನೆ ತಂದೆ-ತಾಯಿ ಇದ್ದಂತೆ. ಅವರ ಪೂಜೆಯನ್ನು ಗುರುವಂದನೆಯ ಮೂಲಕ ಮಾಡುತ್ತಿರುವ ನೀವುಗಳೇ ನಿಜಕ್ಕೂ ಧನ್ಯರು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಸ್. ಟಿ. ನಂದಿಬೇವೂರ ಹೇಳಿದರು.
ನರೇಗಲ್ಲದ ಶ್ರೀ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ 1985-86ನೇ ಸಾಲಿನ, ಐ.ಟಿ.ಸಿ ಪ್ರಶಿಕ್ಷಣಾರ್ಥಿಗಳ ಮತ್ತು 1984ರ ಪಿಯುಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರು-ಶಿಷ್ಯರ ಸಂಬಂಧ ತಾಯಿ-ಮಗುವಿನ ಸಂಬಂಧವಿದ್ದಂತೆ. ನಮ್ಮ ಜೀವನವನ್ನು ರೂಪಿಸುವುದಕ್ಕಾಗಿ ಅವರು ನಮ್ಮನ್ನು ಶಿಕ್ಷಿಸುತ್ತಾರೆ. ಅದನ್ನು ಪ್ರಸಾದವೆಂದು ಸ್ವೀಕರಿಸಿದ ಪ್ರತಿಯೊಬ್ಬರೂ ಜೀವನದಲ್ಲಿ ಉನ್ನತದ ಸ್ಥಿತಿಯನ್ನೇ ಕಾಣುತ್ತಾರೆ. ವ್ಯತಿರಿಕ್ತವಾಗಿ ತೆಗೆದುಕೊಂಡವರು ಅವನತಿ ಹೊಂದುತ್ತಾರೆ. ಇಂತಹ ಅದೆಷ್ಟೋ ನಿದರ್ಶನಗಳು ನಮ್ಮ ನಿಮ್ಮೆಲ್ಲರ ಕಣ್ಣ ಮುಂದಿವೆ ಎಂದು ನಂದಿಬೇವೂರ ಹೇಳಿದರು.
ಈ ವಿದ್ಯಾರ್ಥಿಗಳು ನೆರವೇರಿಸುತ್ತಿರುವ ಗುರುವಂದನಾ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ. ಕಲಿತ ವಿದ್ಯಾ ಸಂಸ್ಥೆಯನ್ನು, ಕಲಿಸಿದ ಗುರುಗಳನ್ನು ಮರೆಯದೆ ಅವರು ಇಂತಹ ಅಭೂತಪೂರ್ವ ಕಾರ್ಯ ನೆರವೇರಿಸಿದ್ದಕ್ಕಾಗಿ ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ನಂದಿಬೇವೂರ ಹೇಳಿದರು.
ಆ ಸಮಯದಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದ ಡಾ. ಬಿ.ವಿ.ಶಿರೂರ, ಎಸ್. ವಿ. ಶಿರೋಳ, ಬಿ. ಎಫ್. ಚೇಗರೆಡ್ಡಿ, ಎಂ.ಎ. ಹಿರೆವಡೆಯರ, ಸರ್ವಮಂಗಳಾ ನಾಶಿ, ಎಲ್.ಎಸ್. ಹಿರೇಮಠ, ಎಸ್. ಡಿ. ಪಾಟೀಲ, ಎಂ. ವಿ. ಶ್ರೀಮತಿ, ಎನ್. ವೈ. ನಾಗನಗೌಡರ, ಆರ್. ಎಸ್. ಪಾಟೀಲ ಗುರುವಂದನೆ ಸ್ವೀಕರಿಸಿದರು.
ಹಾಲಕೆರೆ ಸಂಸ್ಥಾನದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಸಮಾರಂಭವನ್ನು ಉದ್ಘಾಟಿಸಿದರು. ಹಾಲಕೆರೆ ಶ್ರೀಮಠದ ಪೀಠಾಧಿಪತಿಗಳ ಪರಂಪರೆಯಲ್ಲಿ ಬೆಳೆದು ಬಂದ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುದಕ್ಕೆ ಇಂದಿನ ಸಮಾರಂಭವೇ ಸಾಕ್ಷಿ. ಈ ನೆಪದಲ್ಲಿ ಈ ಹಿಂದಿನ ಎಲ್ಲ ಗುರುಗಳನ್ನು ಒಂದೇ ವೇದಿಕೆಯ ಮೇಲೆ ಕಾಣುವ ಸೌಭಾಗ್ಯ ಎಲ್ಲರಿಗೂ ದೊರಕಿತು. ನಮಗೆ ಅತ್ಯಂತ ಸಂತೋಷ ನೀಡಿದ ಸಮಾರಂಭವಿದು ಎಂದು ಹೇಳಿದ ಶ್ರೀಗಳು, ಶಿಕ್ಷಕರ ಕೈಯಲ್ಲಿ ಶಾಲೆ ಕಲಿತು ಬದುಕು ರೂಪಿಸಿಕೊಂಡವರೆಲ್ಲರೂ ಇಂತಹ ಸಮಾರಂಭಗಳನ್ನು ಏರ್ಪಡಿಸಿ ಗುರುವಿನ ಋಣವನ್ನು ಕಿಂಚಿತ್ತಾದರೂ ತೀರಿಸಲು ಮುಂದಾಗಬೇಕೆಂದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸಂಸ್ಥೆಯ ಆಡಳಿತಾಧಿಕಾರಿ ಎನ್. ಆರ್. ಗೌಡರ, ಬಸವರಾಜ ವೀರಾಪೂರ, ಪ್ರಾಚಾರ್ಯ ಎಸ್. ಜಿ.ಕೇಶಣ್ಣವರ, ಪಿಯು ಕಾಲೇಜ್ ಪ್ರಾಚಾರ್ಯ ವೈ.ಸಿ.ಪಾಟೀಲ, ಅನುಸೂಯಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಉಪನ್ಯಾಸಕ ಎಫ್. ಎನ್. ಹುಡೇದ ವಿಶೇಷ ಉಪನ್ಯಾಸ ನೀಡಿದರು.