ಗುರುರಾಯರ ಮಠದಲ್ಲಿ ಆರಾಧನ ಮಹೋತ್ಸವ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೩೦: ನಗರದ ಕೆ.ಬಿ.ಬಡಾವಣೆಯಲ್ಲಿನ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದಿನಿಂದ  ಸೆಪ್ಟಂಬರ್ 2ರ ಶನಿವಾರದವರೆಗೆ ಶ್ರೀಗುರುರಾಯರ 352ನೇ ಆರಾಧನಾ ಮಹೋತ್ಸವ ನಡೆಯಲಿದೆ. 4 ದಿನಗಳ ಕಾಲ ಗುರುರಾಯರ ಆರಾಧನಾ ಮಹೋತ್ಸವವು ಜರುಗಲಿದ್ದು, ವಿವಿಧ ರೀತಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ಇಂದು ಸಂಜೆಯಿಂದ ದ್ವಜಾರೋಹಣ, ಗೋಪೂಜೆ, ಧಾನ್ಯಪೂಜೆ, ರಥೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ದ್ವಜಾರೋಹಣ ಕಾರ್ಯವನ್ನು ಶ್ರೀಮಠದ ನಿರ್ದೇಶಕ ಜೆ.ಎನ್.ವಸಂತ್ ಕುಮಾರ್ ನೆರವೇರಿಸುವರು. ಗುರುವಾರದಿಂದ ಮೂರುದಿನಗಳ ಕಾಲ ಬೆಳಿಗ್ಗೆ 5ರಿಂದ ವಿವಿಧ ಧಾರ್ಮಿಕ ಕ್ರಿಯೆಗಳು ನಡೆಯಲಿದ್ದು, ಪಂಡಿತರಿಂದ ಉಪನ್ಯಾಸ, ಹರಿ ವಾಯುಸ್ತುತಿ ಪಾರಾಯಣ, ಶ್ರೀರಾಘವೇಂದ್ರ ಅಷ್ಟೋತ್ತರ ಪಾರಾಯಣ ಇನ್ನಿತರೆ ಕಾರ್ಯಕ್ರಮಗಳು ನದೆಯಲಿವೆ ಎಂದು ಸಂಘದ ಅಧ್ಯಕ್ಷ ಕೋ.ಸ.ಪ್ರಸನ್ನ ಕುಮಾರ್ ತಿಳಿಸಿದ್ದಾರೆ.ಗುರುವಾರ ಸಂಜೆ 7ರಿಂದ ಪೂರ್ವಾರಾಧನೆ, ದಾವಣಗೆರೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಮಾಧವಿ ಗೋಪಾಲಕೃಷ್ಣ ಮತ್ತು ಶಿಷ್ಯವೃಂದ ದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಸೆಪ್ಟಂಬರ್ 1ರ ಸಂಜೆ 7ರಿಂದ ರಾಜಗೋಪಾಲ ಭಾಗವತ್‍ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ  ಕಾರ್ಯಕ್ರಮ ಹಾಗೂ ಉತ್ತರಾರಾಧನೆ ನಡೆಯಲಿವೆ.2ರ ಶನಿವಾರ ಬೆಳಿಗ್ಗೆ 10.30ರಿಂದ ಕೆ.ಬಿ ಬಡಾವಣೆಯ ರಾಜಬೀದಿಗಳಲ್ಲಿ ವೈಭವೋಪೇತವಾಗಿ ಶ್ರೀಗುರುರಾಯರ ಚಲ ಪ್ರತಿಮೆಯೊಂದಿಗೆ ಹಾಗು ರಾಘವೇಂದ್ರ ಸ್ವಾಮಿಗಳು ರಚಿಸಿರುವ ಪರಿಮಳಾ ಗ್ರಂಥದ ಮೆರವಣಿಗೆ, ವೇದ ಘೋಷ ಭಜನೆ, ನಾದಸ್ವರ, ಚಂಡೆಮೇಳಗಳೊಂದಿಗೆ ಜರುಗಲಿದೆ. ಸಂಜೆ 7ರಿಂದ ವಿದ್ವಾನ್ ವಿಶ್ವಂಭರ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.