ಗುರುಭವನ ನಿರ್ಮಾಣಕ್ಕೆ ಅಗತ್ಯ ಕ್ರಮ- ಅಬ್ಬಯ್ಯ

ಹುಬ್ಬಳ್ಳಿ, ಜ7- ಶಿಕ್ಷಕರ ಸಾಂಸ್ಕøತಿಕ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳ ಅನುಕೂಲಕ್ಕಾಗಿ ಅವಶ್ಯವಿರುವ “ಗುರು ಭವನ” ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ತಿಳಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹುಬ್ಬಳ್ಳಿ ಶಹರ ಘಟಕದಿಂದ ಬಿಡ್ನಾಳದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ “ರಾಷ್ಟ್ರದ ಪ್ರಥಮ ಶಿಕ್ಷಕಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನಾಚರಣೆ ಹಾಗೂ ಸಂಘದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ” ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ನಿರ್ಮಾತೃಗಳಾದ ಶಿಕ್ಷಕರಿಗೆ ಒಂದು ತಲೆಮಾರನ್ನು ಸಹ ಪರಿವರ್ತಿಸುವ ಶಕ್ತಿ ಇದ್ದು, ಸಂಘಟನೆ ಮೂಲಕ ಶಿಕ್ಷಕರ ಕ್ಷೇತ್ರದ ಸವಾಲು, ಸಮಸ್ಯೆ ಪರಿಹಾರೋಪಾಯಗಳ ಬಗ್ಗೆ ಚಿಂತನೆ ನಡೆಸಬೇಕು. ಸಂಘಕ್ಕೆ ಗೌರವ ತರುವ ರೀತಿಯಲ್ಲಿ ಸದಸ್ಯರು ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಕೇವಲ ವಿಸಿಟಿಂಗ್ ಕಾರ್ಡಗೆ ಮಾತ್ರ ಸೀಮಿತವಾಗಬೇಕಾಗುತ್ತದೆ ಎಂದು ಸಲಹೆ ನೀಡಿದರು.
ಕಂದಾಚಾರ, ಸಾಮಾಜಿಕ ಪಿಡುಗುಗಳಿಂದ ಜಿಡ್ಡುಗಟ್ಟಿದ್ದ ಅಂದಿನ ಸಮಾಜದಲ್ಲಿ ತಮಗಾದ ಹಲವು ಸವಾಲು-ಅವಮಾನಗಳನ್ನು ಮೆಟ್ಟಿ ಮಹಿಳೆಯರ ಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಸಾವಿತ್ರಿಬಾಯಿ ಫುಲೆ ಅವರು ಅಕ್ಷರದ ಅವ್ವ ಎಂದೇ ಖ್ಯಾತರಾಗಿದ್ದರು. ಅವರ ಜನ್ಮದಿನಾಚರಣೆ ಶಿಕ್ಷಕರಿಗೆ ಪ್ರೇರೇಪಣೆಯಾಗಲಿ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಮಾತನಾಡಿ, ಶಿಕ್ಷಕರ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಸಂಘವು ಶಿಕ್ಷಕರ ವೇತನ, ಬಡ್ತಿ ಇನ್ನಿತರೆ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದೆ. ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಆಚರಣೆಗೆ ನಾಂದಿ ಹಾಡಿದ ಕೀರ್ತಿ ಸಂಘಕ್ಕಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ವಿಜನಗೌಡ ಪಾಟೀಲ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್. ಶಿವಳ್ಳಿಮಠ, ಎಐಪಿಟಿಎಸ್ ಉಪಾಧ್ಯಕ್ಷ ಬಸವರಾಜ ಗುರಿಕಾರ, ಸಂಘದ ರಾಜ್ಯ ಉಪಾಧ್ಯಕ್ಷ ವೈ.ಎಚ್. ಬಣವಿ, ಜಿಲ್ಲಾಧ್ಯಕ್ಷ ವಿ.ಎಫ್. ಚುಳಕಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ತಾಲೂಕಾಧ್ಯಕ್ಷ ಎಂ.ಎಚ್. ಜಂಗಳಿ, ಎಂ.ಯು. ಶಿರಹಟ್ಟಿ, ಎಸ್.ಎಫ್. ಸಿದ್ದನಗೌಡರ, ಎಸ್.ಜಿ. ಸುಬ್ಬಾಪೂರಮಠ, ಪ್ರೇಮಾ ಕುರಹಟ್ಟಿ, ಲಲಿತಾ ಕೊಪ್ಪದ, ಇತರರು ಇದ್ದರು.