ಗುರುಬಸವ ಪಟ್ಟದ್ದೇವರ ನಿಸ್ವಾರ್ಥ ಸೇವೆಗೆ ಸಂದ ಗೌರವ

ಭಾಲ್ಕಿ:ಜ.19: ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರಿಗೆ 2020-21ನೇ ಸಾಲಿನ ಸಂಯಮ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತಸ ತರಿಸಿದೆ ಎಂದು ಶಾಸಕ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ಗುರುಬಸವ ಪಟ್ಟದ್ದೇವರು ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ.

ಡಾ.ಚನ್ನಬಸವ ಪಟ್ಟದ್ದೇವರು, ಡಾ.ಬಸವಲಿಂಗ ಪಟ್ಟದ್ದೇವರು ತೋರಿದ ದಾರಿಯಲ್ಲಿ ನಡೆಯುತ್ತಿರುವ ಶ್ರೀಗಳು ಬಸವತತ್ವ ಪ್ರಚಾರ ಪ್ರಸಾರದ ಜತೆಗೆ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆ ಜತೆಗೆ ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸಿ ಯುವಕರಲ್ಲಿನ ದುಶ್ಚಟ, ದುರ್ಗುಣಗಳನ್ನು ಬಿಡಿಸುವ ಕೆಲಸ ಮಾಡುತ್ತಿರುವುದು ಮಾದರಿ ಎನಸಿದೆ.

ವಿವಿಧ ಸಮಾಜ ಸೇವೆ ಮೂಲಕ ಶ್ರೀಮಠದ ಕೀರ್ತಿ ರಾಜ್ಯವ್ಯಾಪಿ ಪಸರಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಶ್ರೀಗಳ ಸೇವೆಗೆ ಪ್ರಶಸ್ತಿ ಅರಿಸಿ ಬಂದಿರುವುದು ಖುಷಿ ತಂದು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜ ಸೇವೆ ಕೈಗೊಂಡು ಶ್ರೀಮಠವನ್ನು ಉತ್ತರೋತ್ತರವಾಗಿ ಬೆಳಸಲಿ ಎಂದು ಹಾರೈಸಿದ್ದಾರೆ.