ಗುರುನಾನಕರ ಮಾರ್ಗದಲ್ಲಿ ನಡೆದು ಹೆಚ್ಚು ಸೇವೆ ಸಲ್ಲಿಸುವೆ : ಬಲಬೀರಸಿಂಗ್

ಬೀದರ: ನ.6:ಗುರುನಾನಕ ದೇವ ಆಶೀರ್ವಾದದಿಂದ ದಿ. ಜೋಗಾಸಿಂಗ್ ಅವರ ಮಾರ್ಗದಲ್ಲಿ ನಡೆದು ಇನ್ನಷ್ಟು ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ ಸಲ್ಲಿಸುವೆ. ರಾಜ್ಯೋತ್ಸವ ಪ್ರಶಸ್ತಿ ಕೇವಲ ನನಗೆ ಸಿಕ್ಕಿಲ್ಲ. ಇಡೀ ಜಿಲ್ಲೆಗೆ ಸಿಕ್ಕಿದಷ್ಟು ಆನಂದವಾಗುತ್ತಿದೆ. ನಮ್ಮ ಸಂಸ್ಥೆಯಲ್ಲಿ ಅವಿರತ ಸೇವೆ ಸಲ್ಲಿಸುವ ಎಲ್ಲಾ ಸಿಬ್ಬಂದಿವರ್ಗದವರ ಸಹಕಾರದಿಂದ ನನಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು ಎಂದು ನಾನಕ ಸಾಹೀಬ್ ಹಾಗೂ ಗುರುನಾನಕ ಫೌಂಡೇಶನ್ ಅಧ್ಯಕ್ಷ ಡಾ. ಬಲಬೀರಸಿಂಗ್ ನುಡಿದರು.
ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಂಡ ಅಭಿನಂದನೆಯನ್ನು ಸ್ವೀಕರಿಸಿ ಬಲಬೀರಸಿಂಗ್ ಮಾತನಾಡಿದರು.
ಗುರುನಾನಕ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷೆ ಶ್ರೀಮತಿ ರೇಷ್ಮಾ ಕೌರ್ ಮಾತನಾಡಿ “ನಮ್ಮ ಮಾವ ದಿ. ಜೋಗಾಸಿಂಗ್ ಮರಣದ ನಂತರ ಬೀದರ ಬಿಡುವ ನಿರ್ಧಾರ ಕೈಗೊಂಡಿದ್ದೇವು. ಆದರೆ ಗಟ್ಟಿ ನಿರ್ಧಾರ ಕೈಗೊಂಡು ಶೈಕ್ಷಣಿಕ ಸೇವೆ ಆರಂಭ ಮಾಡಿದೇವು. ಇಂದು ಜಿಲ್ಲೆಯ ಜನರ ಆಶೀರ್ವಾದದಿಂದ ಹೆಮ್ಮರವಾಗಿ ಬೆಳೆದಿದೆ. ಬೀದರ ಅಭಿವೃದ್ಧಿಯಲ್ಲಿ ಸಂಸ್ಥೆ ಪ್ರಮುಖ ಪಾತ್ರ ವಹಿಸಿದೆ. ಬೀದರನವರು ಎಂದು ಹೇಳಿಕೊಳ್ಳಲು ಇಂದು ನಮಗೆ ಅತೀ ಹೆಮ್ಮೆ ಎನಿಸುತ್ತಿದೆ. ಗುರುನಾನಕ ಆಸ್ಪತ್ರೆ ಮೂಲಕ ಉತ್ತಮ ಆರೋಗ್ಯ ಸೇವೆ ಕೂಡಾ ನೀಡಲಾಗುತ್ತಿದೆ. ಇದಕ್ಕೆಲ್ಲ ಡಾ. ಬಲಬೀರಸಿಂಗ್ ಅವರ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಕಾರಣವಾಗಿದೆ ಎಂದು ಹೇಳುವಾಗ ಬಲಬೀರಸಿಂಗ್ ಅವರ ಕಣ್ಣಂಚಿನಲ್ಲಿ ಆನಂದಬಾಷ್ಪ ಸುರಿಯುತ್ತಿದ್ದವು.
ಸಮಿತಿಯ ಉಪಾಧ್ಯಕ್ಷೆ ಡಾ. ಗುರಮ್ಮ ಸಿದ್ದಾರೆಡ್ಡಿ ಮಾತನಾಡಿ “ರೇಷ್ಮಾ ಕೌರ್ ದಂಪತಿಗಳು ಎಲ್ಲಿಯೂ ವೇದಿಕೆ ಹಂಚಿಕೊಳ್ಳದೇ ತೆರೆಮರೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿ ಯಶಸ್ವಿಯಾಗಿದ್ದಾರೆ. ಬಲಬೀರಸಿಂಗ್ ಅವರ ಸಾಧನೆಗೆ ರೇಷ್ಮಾ ಕೌರ್ ಬೆನ್ನೆಲುಬಾಗಿ ನಿಂತು ಸದಾ ಸ್ಫೂರ್ತಿದಾತರಾಗಿದ್ದಾರೆ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ.ಮೂಲಿಮನಿ ಮಾತನಾಡಿ ಗುರುನಾನಕ ಶಿಕ್ಷಣ ಸಂಸ್ಥೆಗೆ ವಿಶ್ವವಿದ್ಯಾಲಯವಾಗುವ ಎಲ್ಲಾ ಅರ್ಹತೆ ಕೂಡಾ ಇದೆ. ಅಲ್ಲದೇ ಈ ಶಿಕ್ಷಣ ಸಂಸ್ಥೆಯಲ್ಲಿ ವೈಚಾರಿಕತೆ, ಮಾನವೀಯತೆ, ಸಹಿಷ್ಣುತೆ ಅಡಕವಾಗಿದೆ. ಇದು ಇನ್ನುಳಿದ ಸಂಸ್ಥೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಸಮಿತಿಯ ಸಂಯೋಜಕ ಡಾ. ಜಗನ್ನಾಥ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಅಧ್ಯಕ್ಷ ಡಾ. ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪೂಜ್ಯ ಬಸವಲಿಂಗ ಪಟ್ಟದ್ದೇವರು ಸಾನಿಧ್ಯ ವಹಿಸಿದ್ದರೆ, ಡಾ. ಶಿವಕುಮಾರ ಸ್ವಾಮಿ ಗುಂಪಾ, ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಗುರುದ್ವಾರಾ ಮುಖ್ಯಸ್ಥ ದರ್ಬಾರಾ ಸಿಂಗ್, ರೌಜಾ ಗ್ರೂಪ್ ಆಫ್ ಸ್ಕೂಲ್‍ನ ಮುಫ್ತಿ ಸೈಯದ್ ಸಿರಾಜೊದ್ದಿನ್, ಸಮ್ಮುಖ ವಹಿಸಿದ್ದರು. ವೇದಿಕೆ ಮೇಲೆ ಸಮಿತಿ ಉಪಾಧ್ಯಕ್ಷೆ ಡಾ. ಗುರಮ್ಮಾ ಸಿದ್ದಾರೆಡ್ಡಿ, ಹೈ.ಕ. ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ ವಾಲಿ, ಸದಸ್ಯರಾದ ಬಿ.ಎಸ್.ಕುದರೆ, ಶಿವಯ್ಯ ಸ್ವಾಮಿ, ಶಂಕರರಾವ ಹೊನ್ನಾ, ವೀರಶೆಟ್ಟಿ ಮಣಗೆ, ರೇವಣಸಿದ್ದಪ್ಪ ಜಲಾದೆ, ಪಂಡಿತ್ ಚಿದ್ರಿ, ವೀರೇಂದ್ರ ಶಾಸ್ತ್ರಿ, ಬಸವರಾಜ ಜಾಬಶೆಟ್ಟಿ, ದೇವೇಂದ್ರ ಕಮಲ, ಅಶೋಕ ಹೆಬ್ಬಾಳೆ, ಶಿವಶರಣಪ್ಪ ಗಣೇಶಪುರ, ಪ್ರಕಾಶ ಕನ್ನಾಳೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಿತಿಯ ಕಾರ್ಯದರ್ಶಿ ಅಬ್ದುಲ್ ಖದೀರ್ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ, ಡಾ. ಮಹಾನಂದ ಮಡಕಿ ನಿರೂಪಿಸಿದರು. ಡಾ. ರಾಜಕುಮಾರ ಹೆಬ್ಬಾಳೆ ವಂದಿಸಿದರು.