ಗುರುನಾಥ ಕೊಳ್ಳುರ ಸಮಾಜ ಸೇವೆ ಮಾದರಿ

ಬೀದರ್: ಸೆ.19:ಉದ್ಯಮಿ ಗುರುನಾಥ ಕೊಳ್ಳುರ ಅವರ 59ನೇ ಜನ್ಮ ದಿನವನ್ನು ಭಾನುವಾರ ಅವರ ಅಭಿಮಾನಿ ಬಳಗದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಹೇಶನಗರ ಅಕ್ಕಮಹಾದೇವಿ ವೃದ್ಧಾಶ್ರಮದ ಹಿರಿಯರಿಗೆ ಹಾಸಿಗೆ, ಹೊದಿಕೆ, ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಬ್ರೆಡ್, ಹಣ್ಣು-ಹಂಪಲ ವಿತರಿಸಲಾಯಿತು. 59ನೇ ಜನ್ಮ ದಿನದ ಪ್ರಯುಕ್ತ ಅವರು ಪುಣ್ಯ ಕೋಟಿ ಯೋಜನೆಯಡಿ ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋ ಶಾಲೆಯ 59 ಗೋವುಗಳನ್ನು ದತ್ತು ಪಡೆದರು.

ಜಿ.ಕೆ.ಟಾವರ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಮಾತನಾಡಿ,’ನಿಷ್ಠೆಯಿಂದ ಕಾಯಕ ಮಾಡಿದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಗುರುನಾಥ ಕೊಳ್ಳುರ ಉತ್ತಮ ನಿದರ್ಶನ’ ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ‘ಕಾಯಕ ಮತ್ತು ದಾಸೋಹ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಸರಳ ವ್ಯಕ್ತಿತ್ವದ ಗುರುನಾಥ ಕೊಳ್ಳುರ ಅವರು ಸಮಾಜದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿಕೊಂಡಿದ್ದಾರೆ’ ಎಂದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಶಿವಾನಂದ ಸ್ವಾಮೀಜಿ, ಬೆಂಗಳೂರು ಯಲಹಂಕದ ರಾಮಕೃಷ್ಣ ವೇದಾಂತ ಆಶ್ರಮದ ಅಧ್ಯಕ್ಷ ಸ್ವಾಮಿ ಅಭಯಾನಂದ ಮಹಾರಾಜ, ತಡೋಳಾ-ಮೆಹಕರ್ ಸಂಸ್ಥಾನದ ರಾಜೇಶ್ವರ ಶಿವಾಚಾರ್ಯ, ಬೀದರ್‍ನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅವರು ಕೊಳ್ಳುರ ಸಮಾಜ ಸೇವೆಯನ್ನು ಕೊಂಡಾಡಿದರು.

ಸನ್ಮಾನ ಸ್ವೀಕರಿಸಿ ಗುರುನಾಥ ಕೊಳ್ಳುರ ಮಾತನಾಡಿ, ‘ಜೀವನ ನಮಗೆ ದೇವರು ಕೊಟ್ಟು ದೊಡ್ಡ ಕಾಣಿಕೆಯಾಗಿದೆ. ಇದನ್ನು ಸಾರ್ಥಕ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು. ಸಮಾಜದಲ್ಲಿ ಒಳ್ಳೆಯವರಾಗಿ ಬಾಳಲು ಸದಾ ಚಿಂತಿಸಬೇಕು. ನಮ್ಮಿಂದ ಮತ್ತೊಬ್ಬರಿಗೆ ಅಲ್ಪ ನೆರವಾಗುವ ಅವಕಾಶ ಸಿಕ್ಕರೆ ಅದು ನಮ್ಮ ಸೌಭಾಗ್ಯ’ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಕೆಎ???ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ ಪಾಟೀಲ ಗಾದಗಿ, ಅರಹಂತ ಸಾವಳೆ, ಬೀದರ್ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಶಟಕಾರ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನನಶೆಟ್ಟಿ, ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ, ಶರಣಪ್ಪ ಮಿಠಾರೆ, ಡಾ.ವಿ.ವಿ.ನಾಗರಾಜ, ಪ್ರಕಾಶ ಟೊಣ್ಣೆ, ಲಕ್ಷ್ಮೀ ಗುರುನಾಥ ಕೊಳ್ಳುರ, ಸಚಿನ್ ಕೊಳ್ಳುರ ಇದ್ದರು. ವಿರೂಪಾಕ್ಷ ಗಾದಗಿ ಸ್ವಾಗತಿಸಿದರು. ವೈಜಿನಾಥ ಸಜ್ಜನಶೆಟ್ಟಿ ನಿರೂಪಿಸಿದರು.