ಗುರುತಿನ ಚೀಟಿ ಪಡೆಯಲು ಬೀದಿಬದಿ ವ್ಯಾಪಾರಿಗಳಿಗೆ ಸಲಹೆ

ಹುಳಿಯಾರು, ನ. ೧೦- ಪಟ್ಟಣ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ಸಹಾಯ ಒದಗಿಸಲು ಪ್ರಧಾನಮಂತ್ರಿ ಬೀದಿಬದಿ ಆತ್ಮನಿರ್ಭರ್ ಯೋಜನೆಯನ್ನು ಜಾರಿಗೆ ತಂದಿದ್ದು, ಅರ್ಹ ಫಲಾನುಭವಿಗಳು ಇದರ ಉಪಯೋಗ ಪಡೆಯುವಂತೆ ಜಿಲ್ಲಾ ಕೌಶಲ್ಯಾಭಿವೃದ್ದಿ ಕಚೇರಿ ಅಭಿಯಾನ ವ್ಯವಸ್ಥಾಪಕರಾದ ದೊಡ್ಡವಲ್ಲಪ್ಪ ತಿಳಿಸಿದರು.
ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ್ ನಿಧಿ ಯೋಜನೆಯ ಬಗ್ಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎಲ್.ವಿ. ಮಂಜುನಾಥ್ ಅವರೊಂದಿಗೆ ಪಟ್ಟಣದ ಬೀದಿಬದಿ ವ್ಯಾಪಾರ ಮಾಡುವ ಸ್ಥಳಗಳಿಗೆ ಖುದ್ದಾಗಿ ತೆರಳಿ ಅವರು ಮಾಹಿತಿ ನೀಡಿದರು.
ಆತ್ಮನಿರ್ಭರ್ ನಿಧಿಯ ಯೋಜನೆಯಡಿ ಪ್ರತಿ ಅರ್ಹ ಫಲಾನುಭವಿಗಳಿಗೆ ೧೦ ಸಾವಿರ ರೂ. ಬ್ಯಾಂಕ್ ಸಾಲವನ್ನು ನೀಡಲಾಗುತ್ತಿದ್ದು, ಇದರ ಮರುಪಾವತಿಯನ್ನು ೧೨ ಮಾಸಿಕ ಕಂತುಗಳಲ್ಲಿ ಪಾವತಿ ಮಾಡಬಹುದಾಗಿದೆ. ಈ ಯೋಜನೆಯ ಅನುಕೂಲ ಹೊಂದಬೇಕಾದರೆ ಮೊದಲು ಬೀದಿಬದಿಯ ವ್ಯಾಪಾರಿಗಳು ಎಂಬ ಗುರುತಿನ ಚೀಟಿಯನ್ನು ಪಡೆದಿರಬೇಕು. ಇದಕ್ಕಾಗಿ ತಾವು ವ್ಯಾಪಾರ ಮಾಡುತ್ತಿರುವ ಸ್ಥಳದ ಪೋಟೋ, ಆಧಾರ್ ಕಾರ್ಡ್, ಪಡಿತರ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಮತ್ತಿತರ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಸ್ಥಳೀಯ ಪಟ್ಟಣ ಪಂಚಾಯ್ತಿಗೆ ನೀಡುವಂತೆ ತಿಳಿಸಿದರು.
ಈಗಾಗಲೇ ಬೀದಿಬದಿ ವ್ಯಾಪಾರಿಗಳ ಅಧಿನಿಯಮ ೨೦೧೪ರ ಅನ್ವಯ ಬೀದಿಬದಿ ವ್ಯಾಪಾರಿಗಳನ್ನು ಸರ್ವೇ ಕಾರ್ಯದ ಮೂಲಕ ಗುರುತಿಸಿ ವ್ಯಾಪಾರ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಗಿದೆ ಎಂದ ಅವರು, ಸದ್ಯ ಜನಸಂಖ್ಯೆಯ ಆಧಾರದ ಮೇಲೆ ಹುಳಿಯಾರು ಪಟ್ಟಣ ಪಂಚಾಯ್ತಿಗೆ ಒಟ್ಟು ೧೫೪ ಬೀದಿಬದಿ ವ್ಯಾಪಾರಿಗಳ ಕಾರ್ಡ್ ಗುರಿ ನಿಗದಿಪಡಿಸಲಾಗಿದೆ. ಪ್ರಸ್ತುತ ೫೦ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದು, ೨೭ ಬೀದಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿಯಾಗಿದೆ ಎಂದು ಮಾಹಿತಿ ನೀಡಿದರು.