ಗುರುತಿನ ಚೀಟಿ ಇದ್ದವರಿಗೆ ಲಾಡ್ಜನಲ್ಲಿ ಕೊಠಡಿ -ಕಾಂಬ್ಳೆ

ಸಿಂಧನೂರು.ಜು.೨೮- ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಇದ್ದವರಿಗೆ ಮಾತ್ರ ಲಾಡ್ಜಿನಲ್ಲಿ ಇರಲು ಕೊಠಡಿಗಳನ್ನ ನೀಡಬೇಕು.ಯಾವುದೇ ದಾಖಲಾತಿ ಇಲ್ಲದ ವ್ಯಕ್ತಿಗಳಿಗೆ ಕೊಠಡಿಗಳನ್ನು ಕೊಡಬಾರದು ಎಂದು ಲಾಡ್ಜ್ ಗಳ ಮಾಲೀಕರಿಗೆ ಸಿಪಿಐ ಉಮೇಶ ಕಾಂಬ್ಳೆ ತಾಕೀತು ಮಾಡಿದರು.
ನಗರ ಠಾಣೆಯಲ್ಲಿ ನಗರದ ಲಾಡ್ಜ್ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯಾವುದೇ ಗುರುತಿನ ಚೀಟಿ ಇಲ್ಲದೆ ಲಾಡ್ಜ್‌ಗಳಲ್ಲಿ ವಾಸ ಮಾಡುವ ಅನುಮಾನಾಸ್ಪದ ವ್ಯಕ್ತಿಗಳಿಂದ ಸಮಾಜದಲ್ಲಿ ಅಪರಾದ ಕೃತ್ಯಗಳು ನಡೆಯುತ್ತಿದ್ದು, ಇವುಗಳಿಗೆ ನಿಯಂತ್ರಣ ಹಾಕಲು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ ಎಂದರು.
ಲಾಡ್ಜ್‌ಗಳು ಹಾಗೂ ಲಾಡ್ಜ್‌ಗಳ ಮುಖ್ಯರಸ್ತೆಯಲ್ಲಿ ಜನ ಹಾಗೂ ವಾಹನಗಳು ಸಂಚರಿಸುವ ಬಗ್ಗೆ ಸಂಪೂರ್ಣವಾಗಿ ಕಾಣುವಂತೆ ಸಿಸಿ ಕ್ಯಾಮರಾಗಳನ್ನು ಹಾಕಬೇಕು ಮತ್ತು ಲಾಡ್ಜ್‌ಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಹಾಗೂ ವಾಹನಗಳ ನಿಂತ ಬಗ್ಗೆ ತಡ ಮಾಡದೆ ಪೊಲೀಸರಿಗೆ ಮಾಹಿತಿ ನೀಡಬೇಕು.
ರಾತ್ರಿ ವೇಳೆ ಕೊಠಡಿ ಪಡೆದು ಕೊಠಡಿಯಲ್ಲಿ ಮಲಗದೆ ಹೊರಗಡೆ ಸುತ್ತಾಡಿ ಮುಂಜಾನೆ ಲಾಡ್ಜ್‌ನಲ್ಲಿ ಬಂದು ಮಲಗುವ ವ್ಯಕ್ತಿಗಳಿಂದ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು ಇಂತವರ ಬಗ್ಗೆ ನಿರ್ಲಕ್ಷ್ಯ ಮಾಡದೆ ಸೂಕ್ಷ್ಮವಾಗಿ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರೆ ಅಪರಾಧ ಕೃತ್ಯ ನಡೆಯದಂತೆ ಪೊಲೀಸರ ಜೊತೆ ಲಾಡ್ಜ್ ಮಾಲೀಕರು ಸಹಕರಿಸಬೇಕು.
ಲಾಡ್ಜ್‌ಗಳಲ್ಲಿ ಅಕ್ರಮ ಮದ್ಯ ಸರಬರಾಜು ,ಇಸ್ಪೀಟ್, ಮಟ್ಕಾ ಚಟುವಟಿಕೆ ಗಳು ನಡೆಯುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು ಇವುಗಳಿಗೆ ಕಡಿವಾಣ ಹಾಕಬೇಕು. ಯಾವುದೇ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ನಾವು ದಾಳಿಮಾಡಿದಾಗ ಈ ಕೃತ್ಯಗಳು ಕಂಡು ಬಂದರೆ ಅಂತಹ ಲಾಡ್ಜ್ ಮಾಲೀಕರ ಮೇಲೆ ಯಾವುದೇ ಮೂಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿಪಿಐ ಉಮೇಶ ಕಾಬ್ಳೆ ಲಾಡ್ಜ್ ಗಳ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರ ಠಾಣೆ ಪಿಎಸೈ ಸೌಮ್ಯ, ಅಪರಾಧ ವಿಭಾಗ ಪಿಎಸೈ ಬೆಟ್ಟಯ್ಯ, ವಸಂತ ಮಹಲ್, ಗೀತಾ ಲಾಡ್ಜ್ , ಎಸ್‌ಆರ್ ಎಸ್, ತಾಜ್ ಕಂಪೋರ್ಟ್, ಅಶ್ವಿನಿ, ಸಿಬಿ ಲಾಡ್ಜ್, ಆದರ್ಶ ಲಾಡ್ಜ್ , ಪ್ರಶಾಂತ ಲಾಡ್ಜ್, ದುರ್ಗಾ ಲಾಡ್ಜ್, ಮಾನ್ಯತಾ ಲಾಡ್ಜ್, ಪ್ರಿಯಾ ಒಟ್ಟು ೧೫ ಲಾಡ್ಜ್‌ಗಳಲ್ಲಿ ೧೨ ಲಾಡ್ಜ್ ಮಾಲೀಕರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿ ಪೊಲೀಸ್ ಇಲಾಖೆ ನಿಯಮಗಳನ್ನು ಪಾಲಿಸುವುದಾಗಿ ತಿಳಿಸಿದರು.