ವಾಡಿ:ಏ.20: ಸಾಮಾಜಿಕ ವ್ಯವಸ್ಥೆಯ ಸರಿ ತಪ್ಪುಗಳನ್ನು ಅರಿತು ಬದುಕಲು ಅಕ್ಷರ ಜ್ಞಾನ ಹೊಂದುವುದು ಬಹಳ ಮುಖ್ಯ. ಶಿಕ್ಷಣ ನೀಡಿದ ಗುರುಗಳ ಮಾರ್ಗದಲ್ಲಿ ನಡೆದರೆ ಪ್ರಬುದ್ಧ ಜೀವನ ಕಟ್ಟಿಕೊಳ್ಳಬಹುದು ಎಂದು ಸಾವಿತ್ರಿಬಾಯಿ ಫುಲೆ ಸರ್ಕಾರಿ ಶಿಕ್ಷಕಿಯರ ಸಂಘದ ಚಿತ್ತಾಪುರ ತಾಲೂಕು ಅಧ್ಯಕ್ಷೆ ನಾಗರತ್ನಾ ಮಲಘಾಣ ಹೇಳಿದರು.
ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಸ್ಥೆಯಲ್ಲಿ ಏರ್ಪಡಿಸಲಾಗಿದ್ದ 2002-03ನೇ ಸಾಲಿನ ಹತ್ತನೇ ತರಗತಿಯ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಇಪ್ಪತ್ತು ವರ್ಷಗಳ ನಂತರ ಮತ್ತೆ ಹಳೆಯ ವಿದ್ಯಾರ್ಥಿಗಳೆಲ್ಲರೂ ಒಂದೆಡೆ ಸೇರೋದು, ಕಲಿಸಿದ ಗುರುಗಳನ್ನು ಸಂಪರ್ಕಿಸಿ ಒಂದೇ ವೇದಿಕೆಯಡಿ ತಂದು ಗೌರವಿಸೋದು ಸರಳವಾದ ಕೆಲಸವಲ್ಲ. ಆ ಪ್ರೀತಿ ವಾತ್ಸಲ್ಯದ ನಂಟು ಬೆಸೆದುಕೊಂಡಾಗಲೇ ಈ ಸ್ನೇಹ ಸಮ್ಮಿಲನವಾಗಲು ಸಾಧ್ಯ. ಶಿಸ್ತು, ವಿನಯ, ಪ್ರಾಮಾಣಿಕತೆ, ಕರುಣೆ, ಮಮತೆಯನ್ನು ಜೀವನದಲ್ಲಿ ಅಳವಡಿಸಿಕೊಂಡವರು ಮಾತ್ರ ಸ್ನೇಹ ಸಂಬಂದವನ್ನು ಒಂದುಗೂಡಿಸಬಲ್ಲರು. ಅಕ್ಷರ ಕಲಿಸಿದ ಗುರುಗಳಿಗೆ ಸಂಬಳ ಎಷ್ಟು ಬಂತು ಎಂಬುದು ಮುಖ್ಯವಾಗಲ್ಲ. ನೀಡಿದ ಶಿಕ್ಷಣದಿಂದ ಎಷ್ಟು ಜನ ಮಕ್ಕಳ ಬಾಳಿನಲ್ಲಿ ಬೆಳಕು ಮೂಡಿಸಿತು ಎಂಬುದು ಮುಖ್ಯವಾಗುತ್ತದೆ ಎಂದರು.
ಮಲ್ಲಿಕಾರ್ಜುನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾಶಿವ ಕಟ್ಟಿಮನಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಅಣ್ಣಾರಾವ ಪಸಾರೆ, ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷ ಶಾಂತಪ್ಪ ಶೆಳ್ಳಗಿ, ವೀರಶೈವ ಸಮಾಜದ ಕಾರ್ಯದರ್ಶಿ ಬಸವರಾಜ ಕೀರಣಗಿ, ಮುಖಂಡರಾದ ಭೀಮಶಾ ಜಿರೊಳ್ಳಿ, ಸಿದ್ದಲಿಂಗಯ್ಯ ಸ್ವಾಮಿ, ಶಿಕ್ಷಕರಾದ ಇಂದ್ರಾ ಜಿ.ಕೆ, ಶಿವುಕುಮಾರ ಮಲಕಂಡಿ, ಸುನೀಲ ಕುಲಕರ್ಣಿ, ಮಲ್ಲೇಶ ನಾಟೀಕಾರ, ಕನ್ನಪ್ಪ ಬಾಸುತ್ಕರ್, ಸುಲೋಚನಾ ಸಿಂಧೆ, ರಮೇಶ ಮಾಶಾಳಕರ, ಸೂರ್ಯಕಾಂತಮ್ಮ, ಅರುಣಾ ಪಾಟೀಲ, ಪ್ರಕಾಶ ಜ್ಯೋಶಿ, ಸಿದ್ದಯ್ಯ, ಬಸಯ್ಯ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿ ಮುಖಂಡರಾದ ಮಡಿವಾಳ ಬಿದನೂರ, ರಾಜು ಒಡೆಯರಾಜ, ಹುಸನಯ್ಯ ಗುತ್ತೇದಾರ, ಗಣೇಶ ರಾಠೋಡ ಪ್ರಾಸ್ತಾವಿಕ ನುಡಿದರು. ಅನಿತಾ ಶ್ರೀಮಂತ ಸ್ವಾಗತಿಸಿದರು. ಗುಂಡಪ್ಪ ಭಂಕೂರ ನಿರೂಪಿಸಿದರು. ಉಮೇಶ ನಾಟೀಕಾರ ವಂದಿಸಿದರು.