ಗುರುಕುಲ ಮಾದರಿ ಶಿಕ್ಷಣ: ರಂಭಾಪುರಿ ಶ್ರೀ ಶ್ಲಾಘನೆ

ಬೀದರ್:ಮೇ.18: ನಗರದ ನೌಬಾದ್ ಸಮೀಪದ ಚೊಂಡಿ ರಸ್ತೆಯಲ್ಲಿ ನಿರ್ಮಿಸಿರುವ ದಿ ಇನ್ಫಿನಿಟಿ ಶಾಲೆಯ ನೂತನ ಕ್ಯಾಂಪಸ್ ಅನ್ನು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗತ್ಪಾದರು ಶುಕ್ರವಾರ ಉದ್ಘಾಟಿಸಿದರು.
ನಿಸರ್ಗದ ಮಡಿಲಲ್ಲಿ ಗುರುಕುಲ ಮಾದರಿ ಶಾಲೆ ಆರಂಭಿಸಿ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುತ್ತಿರುವ ನಿರಂತರ ಫೌಂಡೇಷನ್ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ನೈತಿಕತೆ, ಮಾನವೀಯ ಮೌಲ್ಯಗಳು ಒಳಗೊಂಡ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ ಎಂದು ತಡೋಳಾ-ಮೆಹಕರದ ರಾಜೇಶ್ವರ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಶಾಲೆಯ ಧ್ಯೇಯವಾಗಿದೆ. ಶಾಲೆಯಿಂದ 20 ಗ್ರಾಮಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ನಿರಂತರ ಫೌಂಡೇಷನ್ ಸಂಸ್ಥಾಪಕ ನಿರಂಜನ ಶೀಲವಂತ ತಿಳಿಸಿದರು.
ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಸಮಗ್ರ ಬೆಳವಣಿಗೆಗೆ ಶ್ರಮಿಸಲಾಗುತ್ತಿದೆ ಎಂದು ಶಾಲೆಯ ಆಡಳಿತಾಧಿಕಾರಿ ಲಕ್ಷ್ಮಿ ಮುಗಳಿ ಹೇಳಿದರು.
ಶ್ರೀನಿವಾಸ್ ಸರಡಗಿಯ ರೇವಣಸಿದ್ಧ ಶಿವಾಚಾರ್ಯ, ಬಸವಕಲ್ಯಾಣದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ತೋಟಗಾರಿಕೆ ಕಾಲೇಜಿನ ಡೀನ್ ಡಾ. ಎಸ್.ವಿ. ಪಾಟೀಲ, ನಿರಂತರ ಫೌಂಡೇಷನ್ ಟ್ರಸ್ಟಿ ಶಿವಾನಂದ ಶೀಲವಂತ, ಪ್ರಾಚಾರ್ಯ ಡಾ. ದತ್ತರಾಜ ಕುಲಕರ್ಣಿ, ಉಪ ಪ್ರಾಚಾರ್ಯೆ ಪ್ರಾಪ್ತಿ ಧನಂಜಯ್ ನಾಯಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು, ಪಾಲಕರು ಹಾಗೂ ಶಾಲೆ ಸಿಬ್ಬಂದಿ ಭಾಗವಹಿಸಿದ್ದರು.