ಗುರುಕರುಣೆಯೇ ಸಾಧನೆಗೆ ಮೂಲ : ಡಾ. ವಿರೂಪಾಕ್ಷ ಶಿವಾಚಾರ್ಯರು

ಭಾಲ್ಕಿ:ಏ.17: ಗುರು ಕರುಣೆಯಿಲ್ಲದೇ ಯಾವುದೇ ಸಾಧನೆಯು ಅಸಾಧ್ಯವಾಗಿದೆ. ಗುರುಕರುಣೆಯೇ ಸಾಧನೆಗೆ ಮೂಲಾಧಾರವಾಗಿದೆ ಎಂದು ಸಂಸ್ಥಾನ ಕಪಿಲಾಧಾರ ಜಂಗಮಮಠ, ಶ್ರೀಕ್ಷೇತ್ರ ಮನ್ಮಥಧಾಮದ ಡಾ| ವಿರುಪಾಕ್ಷ ಶಿವಾಚಾರ್ಯರು ಪ್ರತಿಪಾದಿಸಿದರು.
ತಾಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ 188ನೇ ಜಯಂತಿ ಮಹೋತ್ಸವ ನಿಮಿತ್ಯ ಆಯೋಜಿಸಿದ್ದ 6ನೇ ದಿನದ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಶ್ರೀಮಠದ ಶ್ರೀ ಶಂಕರಾನಂದ ಸ್ವಾಮಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠ ಬೀದರಿನ ಸದ್ಗುರು ಡಾ| ಶಿವಕುಮಾರ ಮಹಾಸ್ವಾಮಿಗಳು, ಸಹೋ ವಾಚಾ ನ ವಾ ಅರೆ ಪತ್ಯುಃ ಕಾಮಾಯ ಪತಿಃ ಪ್ರಿಯೋ ಭವತಿ ವಿಷಯದ ಮೇಲೆ ಸವಿಸ್ಥಾರವಾಗಿ ತಿಳಿಸಕೊಟ್ಟರು. ಮುಚಳಂಬದ ನಾಗಭೂಷಣ ಶಿವಯೋಗಿ ಮಠದ ಶ್ರೀ ಪ್ರಣವಾನಂದ ಸ್ವಾಮಿಗಳು, ಕಲಬುರಗಿಯ ಮಾತೋಶ್ರೀ ಲಕ್ಷ್ಮೀದೇವಿ ತಾಯಿ, ಶ್ರೀ ಜಡಿಸಿದ್ದೇಶ್ವರ ಸ್ವಾಮಿಗಳು, ಶ್ರೀ ಗಣೇಶಾನಂದ ಸ್ವಾಮಿಗಳು, ಮಾತೋಶ್ರೀ ಸಿದ್ದೇಶ್ವರಿ ತಾಯಿ, ಮಾತೋಶ್ರೀ ಅಮೃತಾನಂದ ಮಯಿ, ಶ್ರೀ ಪೂರ್ಣಾನಂದ ಸ್ವಾಮಿಗಳು, ಶ್ರೀ ಸದ್ರೂಪಾನಂದ ಭಾರತಿ ಸ್ವಾಮಿಗಳು, ಶ್ರೀ ಪರಮಾನಂದ ಸ್ವಾಮಿಗಳು ಯಳಸಂಗಿ ಯವರು ಪ್ರಸ್ತುತ ವಿಷಯದ ಮೇಲೆ ಮಾತನಾಡಿದರು.
ಇದೇವೇಳೆ ಪ್ರತಿನಿತ್ಯ ಪ್ರಸಾದ ಸೇವೆಗೆ ಸಹಾಯಮಾಡುತ್ತಿರುವ ಭಕ್ತಾದಿಗಳಿಗೆ ಶ್ರೀಮಠದ ಪೂಜ್ಯರು ವೀಭೂತಿ, ಪ್ರಸಾದನೀಡಿ ಗೌರವಿಸಿದರು. ಸದ್ಗುರು ಶಿವಕುಮಾರ ಸ್ವಾಮಿಗಳು ಪ್ರಸಾದ ದಾನಿಗಳಿಗೆ ಸತ್ಕರಿಸಿದರು. ಅನೇಕ ಭಕ್ತರು ಸದ್ಗುರು ಶ್ರೀ ಸಿದ್ಧಾರೂಢರ ಮೂರ್ತಿಯ ತುಲಾಭಾರ ಹಾಗು ಸದ್ಗುರು ಶ್ರೀ ಶಿವಕುಮಾರ ಮಹಾಸ್ವಾಮಿಗಳ ತುಲಾಭಾರ ಸೇವೆ ನೆರವೇರಿಸಿದರು. ಪ್ರಭು ಮಾಸಲದಾರ, ಗುಂಡಪ್ಪ, ಸೋಮನಾಥ ಶೀಲವಂತ, ಬಸವರಾಜ ಹುಲೆಪ್ಪನೋರ ರವರಿಂದ ಸಂಗೀತ ಸೇವೆ ನಡೆಯಿತು. ಶ್ರೀ ಶಂಕರಾನಂದ ಸ್ವಾಮಿಗಳು ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಪಾಟೀಲ ನಿರೂಪಿಸಿದರು.