
(ಸಂಜೆವಾಣಿ ವಾರ್ತೆ)
ಇಂಡಿ: ಆ.6:ಗುರಿ ಮತ್ತು ಮಾರ್ಗ ಸ್ಪಷ್ಟವಾಗಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂದು ನಿರ್ದೇಶಕರು ಸರ್ವಜ್ಞ ಕರಿಯರ್ ಅಕಾಡೆಮಿ ಇಂಡಿಯ ನಾಗೇಶ ಹೆಗಡ್ಯಾಳ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಎಫ್.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ಐ.ಕ್ಯೂ.ಎ.ಸಿ ಮತ್ತು ಪ್ಲೇಸ್‍ಮೆಂಟ್ ಸೆಲ್ ಹಾಗೂ ಸರ್ವಜ್ಞ ಕರಿಯರ್ ಅಕಾಡೆಮಿ ಇಂಡಿ, ಸಹಯೋಗದಲ್ಲಿ ಒಂದು ದಿನದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಲೋಕ ಸೇವಾ ಆಯೋಗ,ಪಿಎಸ್‍ಐ, ಎಫ್‍ಡಿಎ, ಎಸ್‍ಡಿಎ ಸಿದ್ಧತೆ ಮಾಡುವಾಗ ನಾನು ಈಗಾಗಲೆ ಒಬ್ಬ ಐಎಎಸ್, ಕೆಎಎಸ್,ಪಿಎಸ್‍ಐ ಅಧಿಕಾರಿ ಎಂಬ ಭಾವನೆ ತೆಲೆಯಲ್ಲಿಟ್ಟುಕೊಂಡು ಅಧ್ಯಯನ ಶುರುಮಾಡಿ, ಆಗ ನೀವು ಒಂದು ವಿಷಯವನ್ನು ನೋಡುವ ರೀತಿ ಬೇರೆಯದೇ ಆಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಅದೃಷ್ಟವೇ ಅಂತಿಮವಲ್ಲ ಅದೃಷ್ಟ ನಿಮ್ಮನ್ನು ಒಂದು ಹಂತದವರೆಗೆ ಕೊಂಡೊಯ್ಯಬಹುದು ಆದರೆ ಗುರಿ ತಲುಪಲು ಪರಿಶ್ರಮ ಬೇಕೇಬೇಕು ಎಂದು ಹೇಳಿದರು.
ಅತಿಥಿಗಳಾದ ವಿಜಯಕುಮಾರ ಇಮನದ, ಪ್ರಾಂಶುಪಾಲರಾದ ಎಸ್.ಬಿ.ಜಾಧವ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಓದುವ ಮೇಲಿನ ಹಂಬಲ ಕಡಿಮೆಯಾಗುತ್ತಿದೆ ಹಾಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಅವಶ್ಯವಿರುವ ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ನಂಬಿಕೆಗಳ ಬೇರುಗಳನ್ನು ಬಲಗೊಳ್ಳಿಸಿಕೊಳ್ಳಬೇಕು. ಮೌಲ್ಯದ ಬೇರುಗಳು ಗಟ್ಟಿಯಾದಾಗ ಎಲ್ಲಿ ಬೇಕಾದರೂ ಜೀವನ ಕಂಡುಕೊಳ್ಳಬಹುದು. ಬದುಕಿನ ಯಾವುದೇ ಪರೀಕ್ಷೆಗಳನ್ನು ಎದುರಿಸಬಹುದು ಎಂದರು..
ಡಾ.ವಿಶ್ವಾಸ ಕೋರವಾರ, ಡಾ.ಶ್ರೀಕಾಂತ ರಾಠೋಡ, ಡಾ.ಜಯಪ್ರಸಾದ ಡಿ,ಐಶ್ವರ್ಯ ಕಂಬಾರ , ಶ್ರೀಶೈಲ ಮಾತನಾಡಿದರು.