ಗುರಿ ಮತ್ತು ಉದ್ದೇಶಗಳು ಜೀವನಕ್ಕಿರಲಿ- ಎಸಿ

ರಾಯಚೂರು.ಮಾ.೧೯-ಛಲ ಒಂದು ಇದ್ದರೆ ಗೆಲುವು ನಮ್ಮದು ಎಂದು ಹೇಳುತ್ತಾ ಧನಾತ್ಮಕ ವಿಷಯದೆಡೆಗೆ ಗಮನಹರಿಸಿ ನಿಮಗಿರುವ ಪ್ರತಿಭೆಯಲ್ಲಿ ಮುಂದುವರೆದು ಒಂದು ತಾಲ್ಲೂಕು, ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿರದೆ, ಇಡೀ ದೇಶಕ್ಕೆ ಹಾಗೂ ಪ್ರಪಂಚಕ್ಕೆ ಹೆಸರುವಾಸಿಯಾಗಬೇಕೆಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ. ಸಂತೋಷ ಕಾಮಗೌಡ, ಸಹಾಯಕ ಆಯುಕ್ತರು, ರಾಯಚೂರು ಅವರು ತಿಳಿಸಿದರು.
ಅವರು ನಗರದ ಲಕ್ಷ್ಮೀ ವೆಂಕಟೇಶ ದೇಸಾಯಿ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಶಿಕ್ಷಣದೊಂದಿಗೆ ಮೋಜು, ಮಸ್ತಿ ಮತ್ತು ನೃತ್ಯ ಅಗತ್ಯ ಎಂದು ತಿಳಿಸಿದರು. ಜೊತೆಗೆ ವಿದ್ಯಾರ್ಥಿಗಳು ತಮ್ಮ ಗುರು-ಹಿರಿಯರು ಮತ್ತು ಪಾಲಕರನ್ನು ಗೌರವಿಸುವುದರೊಂದಿಗೆ ತಮ್ಮ ಜೀವನದ ಗುರಿ ಮತ್ತು ಉದ್ದೇಶಗಳನ್ನು ಹಾಕಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಲ್.ವಿ.ಡಿ. ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ. ವೆಂಕಟೇಶ ಬಿ. ದೇವರು ಅವರು ಮಾತನಾಡುತ್ತ ಎಲ್.ವಿ.ಡಿ. ಮಹಾವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದುಕೊಂಡಿದ್ದಕ್ಕಾಗಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿನಂದಿಸುತ್ತ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತಾ ವಿದ್ಯಾಭ್ಯಾಸ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದ ಅತಿಥಿಗಳು ಮತ್ತು ಎಲ್.ವಿ.ಡಿ. ಮಹಾವಿದ್ಯಾಲಯದ ಉಪ-ಪ್ರಾಚಾರ್ಯರಾದ ಡಾ. ಎಮ್. ವೀರೆಶಪ್ಪ ಅವರು ವಿದ್ಯಾರ್ಥಿಗಳು ಮಹಾವಿದ್ಯಾಲಯದ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಜೊತೆಗೆ ಪ್ರಥಮ ವರ್ಷದ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಂದ ಮಹಾವಿದ್ಯಾಲಯದ ಮಾಹಿತಿಯನ್ನು ಕಲೆಹಾಕಬೇಕೆಂದು ತಿಳಿಸಿದರು ಜೊತೆಗೆ ವಿದ್ಯಾರ್ಥಿಗಳು ಪದವಿಯಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಪ್ರಥಮ ಸೆಮಿಸ್ಟರ್‌ನಿಂದಲೇ ತಯಾರಿ ನಡೆಸಬೇಕೆಂದು ಹೇಳಿದರು. ಇದರೊಂದಿಗೆ ಅಂತಿಮ ವರ್ಷದ ವಿದ್ಯಾರ್ಥಿಗಳು ಎಲ್.ವಿ.ಡಿ. ಮಹಾವಿದ್ಯಾಲಯದ “ಹಳೆಯ ವಿದ್ಯಾರ್ಥಿಗಳ ಸಂಘ” ಕ್ಕೆ ಸೇರಬೇಕೆಂದು ಕರೆಕೊಟ್ಟರು.
ಇದೇ ಸಂದರ್ಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ “ಕ್ರಿಕೇಟ್ ಟೂರ್ನಮೆಂಟ್”ನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮ ಕು. ಗೌರಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕು. ಮಲ್ಲೇಶ ಅವರು ಗಣ್ಯರನ್ನು ಸ್ವಾಗತಿಸಿದರು. ಕು. ಐಶ್ವರ್ಯ, ಕು. ರೋಜಾ ಎಮ್., ಕು. ಲಕ್ಷ್ಮಣ, ಕು. ಪಾಪಿರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಕು. ಅನುಷಾ ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಉಸ್ತುವಾರಿ ಶ್ರೀ. ಹುಸೇನಪ್ಪ, ಗಣಿತಶಾಸ್ತ್ರ ಸಹಾಯಕ ಪ್ರಾಧ್ಯಾಪಕರು, ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.