ಗುರಿಮೀರಿ ಸಾಧನೆ ಮಾಡಿದ ಭೂಮಾಪಕರಿಗೆ ಅಭಿನಂದನಾ ಪತ್ರ

ಚಿತ್ರದುರ್ಗ,ಸೆ.16:ಮೋಜಿಣಿಯಲ್ಲಿ ಪ್ರತಿ ತಿಂಗಳು ನೀಡಿದ ಗುರಿಗಿಂತ ಹೆಚ್ಚಿನ ಕೆಲಸ ನಿರ್ವಹಿಸಿದ ಭೂಮಾಪಕರಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅಭಿನಂದನಾ ಪತ್ರ ವಿತರಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರತಿ ತಾಲ್ಲೂಕಿನಲ್ಲಿ ಗರಿಷ್ಟ ಕೆಲಸ ನಿರ್ವಹಿಸಿದ ತಲಾ ಇಬ್ಬರು ಸರ್ಕಾರಿ ಭೂಮಾಪಕರು ಮತ್ತು ಪರವಾನಗಿ ಭೂಮಾಪಕರಿಗೆ ಹಾಗೂ ಜಿಲ್ಲೆಯಲ್ಲಿ ಗರಿಷ್ಠ ಕೆಲಸ ನಿರ್ವಹಿಸಿದ ಒಬ್ಬರು ತಾಲ್ಲೂಕು ಭೂಮಾಪಕರು, ಗರಿಷ್ಠ ಕೆಲಸ ನಿರ್ವಹಿಸಿದ ತಪಾಸಕರು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಜಿಲ್ಲಾಧಿಕಾರಿಗಳು ಅಭಿನಂದನಾ ಪತ್ರ ವಿತರಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಭೂಮಾಪಕರು ಗರಿಷ್ಠ ಕೆಲಸ ಮಾಡಿ ವಿಶೇಷ ಸೇವಾ ಮಾಸವನ್ನು ಅರ್ಥಪೂರ್ಣವಾಗಿ ಸಂಪನ್ನಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
 ಇದೇ ರೀತಿ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಹೆಚ್ಚು ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜುಲೈ ಮತ್ತು ಆಗಸ್ಟ್ ಮಾಹೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 5313 ಕಡತಗಳನ್ನು ನಿರ್ವಹಿಸಬೇಕಾಗಿತ್ತು. ಒಟ್ಟು 8435 ಕಡತಗಳನ್ನು ನಿರ್ವಹಿಸಿ 3122 ಹೆಚ್ಚುವರಿ ಕಡತಗಳನ್ನು ನಿರ್ವಹಿಸಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
 ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಾದ ಎಂ.ಎಸ್.ಕೃಷ್ಣಪ್ರಸಾದ್ ಮಾತನಾಡಿ, ರಾಜ್ಯದಲ್ಲಿಯೇ ಪ್ರಥಮವಾಗಿ ಸಾರ್ವಜನಿಕರಿಗೆ ಹೆಚ್ಚು ಸೇವೆ ಸಲ್ಲಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಿರ್ದೇನದಂತೆ ವಿಶೇಷ ಸೇವಾ ಮಾಸ ಎಂದು ಜುಲೈ ತಿಂಗಳನ್ನು ಘೋಷಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಲಾಗಿತ್ತು ಎಂದು ಹೇಳಿದರು.
ಅದರಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಭೂಮಾಪಕರುಗಳು ಗರಿಷ್ಠ ಕೆಲಸ ಮಾಡಿ ಸಾರ್ವಜನಿಕ ಸೇವಾ ಮಾಸವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಿದ್ದು, ಈ ಕುರಿತು ಬೆಂಗಳೂರು ವಿಭಾಗ ಪ್ರಾದೇಶಿಕ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಗಸ್ಟ್ ಮಾಹೆಯಲ್ಲೂ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪ್ರೇರೇಪಣೆ ನೀಡಲಾಗಿತ್ತು ಎಂದು ಹೇಳಿದರು.
ಜಿಲ್ಲೆಯ ಭೂಮಾಪಕರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಒಬ್ಬ ಭೂಮಾಪಕರು ತಿಂಗಳಿಗೆ ಹೆಚ್ಚುವರಿಯಾಗಿ 25ಕ್ಕೂ ಹೆಚ್ಚು ಕಡತಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ಭೂದಾಖಲೆಗಳ ಸಹಾಯಕ ನಿರ್ದೇಶಕರು ತಾಲ್ಲೂಕು ಮಟ್ಟದಲ್ಲಿ ಉತ್ತಮವಾದ ಸರ್ವೇಯರ್ ತಂಡವನ್ನು ಕಟ್ಟಿಕೊಂಡಾಗ ಜಿಲ್ಲೆಯಲ್ಲಿಯೇ ವಿಶೇಷವಾಗಿ ಕಾರ್ಯನಿರ್ವಹಿಸಬಹುದು ಎಂದು ಸಲಹೆ ನೀಡಿದರು.
ಅಭಿನಂದನಾ ಪತ್ರ ಪಡೆದ ಭೂಮಾಪಕರ ವಿವರ: ಹೊಳಲ್ಕೆರೆಯ ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ಸುಮಾನಾಯ್ಕ್ ಹಾಗೂ ಸೂಪರ್‌ವೈಸರ್ ಡಿ.ವಿದ್ಯಾಧರ, ಚಳ್ಳಕೆರೆ ತಾಲ್ಲೂಕು ಸರ್ವೇಯರ್ ಎ.ಪ್ರಸನ್ನ, ಸರ್ಕಾರಿ ಭೂಮಾಪಕರಾದ ಜೆ.ಪಿ.ಗೋವಿಂದರಾಜು, ಎಸ್.ಆರ್.ಬೋಜಯ್ಯ, ಚಿತ್ರದುರ್ಗ ತಾಲ್ಲೂಕಿನ ಎಸ್.ರಾಜಗೋಪಾಲ್, ಎಂ.ಎಲ್.ಲಕ್ಷö್ಮಣ್ ಗೌಡ, ಮೊಳಕಾಲ್ಮುರು ತಾಲ್ಲೂಕಿನ ಎಂ.ಸಮೀರ್ ಶೇಕ್, ಕುಂಬಾರ ಶಿವರುದ್ರಪ್ಪ, ಹಿರಿಯೂರು ತಾಲ್ಲೂಕಿನ ಕೆ.ಎಸ್.ಅನಿಲ್‌ಕುಮಾರ್, ಕೆ.ಯೋಗೀಶ್, ಹೊಸದುರ್ಗ ತಾಲ್ಲೂಕಿನ ಹೆಚ್.ದ್ರಾಕ್ಷಾಯಣಮ್ಮ, ಬಿ.ಆರ್.ಕುಮಾರ್, ಹೊಳಲ್ಕೆರೆ ತಾಲ್ಲೂಕಿನ ಟಿ.ಎಂ.ಸವಿತಾ, ಸಿ.ಎನ್.ಮಂಜುನಾಥ್, ಎಸ್.ಪ್ರವೀಣ್ ಕುಮಾರ್ ಹಾಗೂ ಪರವಾನಗಿ ಭೂಮಾಪಕರಾದ ಚಳ್ಳಕೆರೆ ತಾ; ಎಂ.ಸಿದ್ದಪ್ಪ, ಕೆ.ಬಾಲರಾಜ, ಚಿತ್ರದುರ್ಗ ತಾ; ಆರ್.ಧರಣೇಶನಾಯ್ಕ್, ಟಿ.ಯಲ್ಲಪ್ಪ, ಮೊಳಕಾಲ್ಮುರು ತಾ; ಬಿ.ಸಿ.ಮುರುಳಿ, ಡಿ.ಚಿದಾನಂದ, ಹಿರಿಯೂರು ತಾ; ಎಸ್.ರಮೇಶ, ಟಿ.ರವಿಕುಮಾರ್, ಹೊಸದುರ್ಗ ತಾ; ಕೆ.ಹೆಚ್.ಕರಿಯಪ್ಪ, ಎಂ.ರವಿ, ಹೊಳಲ್ಕೆರೆ ತಾಲ್ಲೂಕಿನ ಪಿ.ಹೆಚ್.ವಿಶ್ವನಾಥ್, ಎಸ್.ಆರ್.ಕುಮಾರ್ ಅವರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಸೇರಿದಂತೆ ಸರ್ವೇ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.