ಗುಮ್ಮಟ ನಗರಿ ವಿಜಯಪುರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ…! 12 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ:ಬಹಿರ್ದೆಸೆ, ಸ್ನಾನಕ್ಕೂ ನೀರಿಲ್ಲದೆ ನಾಗರಿಕರ ಪರದಾಟ

ರುದ್ರಪ್ಪ ಆಸಂಗಿ

ವಿಜಯಪುರ,ಫೆ.13:ಗುಮ್ಮಟ ನಗರಿ ವಿಜಯಪುರದಲ್ಲಿ ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿಗಾಗಿ ಹಾಹಾಕಾರ ಪರಿಸ್ಥಿತಿ ತಲೆದೋರಿದ್ದು, ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.
ಸುಮಾರು 4ಲಕ್ಷ ಜನಸಂಖ್ಯೆಯನ್ನು ಹೊಂದಿರುವ ವಿಜಯಪುರ ನಗರದಲ್ಲಿ 35 ವಾರ್ಡ್‍ಗಳಿವೆ. 35 ವಾರ್ಡ್‍ಗಳಿಗೆ 40 ಕಿ.ಮಿ. ದೂರದ ಕೊಲ್ಹಾರ ಬಳಿ ಕೃಷ್ಣಾ ನದಿಯಿಂದ ನೀರೆತ್ತುವುದು ಹಾಗೂ ಬೂತನಾಳ ಕೆರೆ ನೀರಿನ ಮೂಲವಾಗಿದೆ. ನಗರದ ಅರ್ಧ ಭಾಗ ಕೃಷ್ಣಾ ನದಿ ಹಾಗೂ ಇನ್ನರ್ಧ ಭಾಗಕ್ಕೆ ಬೂತನಾಳ ಕೆರೆಯಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಈಗಾಗಲೇ ಬೂತನಾಳ ಕೆರೆ ಸಂಪೂರ್ಣ ಬತ್ತಿದೆ. ಹೀಗಾಗಿ ಕಷ್ಣಾ ನದಿ ಮೂಲ ಒಂದೇ ವಿಜಯಪುರಕ್ಕೆ ಗತಿಯಾಗಿದೆ. ಹಾಗಾಗಿ ಒಂದೇ ಮೂಲದಿಂದ ಇಡೀ ವಿಜಯಪುರ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗದೇ ನಾಗರಿಕರು ನೀರಿಗಾಗಿ ಪರಿತಪಿಸುತ್ತಿದ್ದಾರೆ.
ಆದಿಲ್‍ಶಾಹಿ ಕಾಲದಲ್ಲಿ 10ಲಕ್ಷ ಜನರಿಗೆ ದಿನಂಪ್ರತಿ ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತು ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಇಂದು ಕೇವಲ ನಾಲ್ಕು ಲಕ್ಷ ಜನರಿಗೆ ದಿನಂಪ್ರತಿ ನೀರು ಪೂರೈಸುವಲ್ಲಿ ಅಧಿಕಾರಿಗಳು ಏಕೆ ಎಡವಿದ್ದಾರೆ ಎಂಬ ವಿಷಯ ಈಗ ಚರ್ಚೆಗೆ ಗ್ರಾಸವಾಗಿದೆ.

ನೀರು ಪೂರೈಕೆಯಲ್ಲಿ ವೈಫಲ್ಯ
ಆಲಮಟ್ಟಿ ಅಣೆಕಟ್ಟೆಯಲ್ಲಿ ಸದ್ಯಕ್ಕೆ 33.497 ಟಿಎಂಸಿ ನೀರು ಸಂಗ್ರಹವಿದೆ. ವಿಜಯಪುರ ನಗರಕ್ಕೆ ಅಗತ್ಯಕ್ಕಿಂತ ಹೆಚ್ಚು ನೀರಿದೆ. ಆದರೆ ಅಧಿಕಾರಿಗಳು ಸಮರ್ಪಕವಾಗಿ ನೀರು ಪೂರೈಕೆಯಲ್ಲಿ ವಿಫಲರಾಗಿದ್ದೇ ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಹಾಹಾಕಾರಕ್ಕೆ ಕಾರಣವೆಂದು ಬೇರೆ ಹೇಳಬೇಕಿಲ್ಲ.
ನಗರದ ನೀರಿನ ಸಮಸ್ಯೆಯನ್ನು ನೀರು ಮಾರಾಟಗಾರರು ಒಂದು ದಂಧೆ ಮಾಡಿಕೊಂಡಿದ್ದಾರೆ. ಒಂದು ಟ್ಯಾಂಕರ್‍ಗೆ 500 ರೂಪಾಯಿಗಳಿಂದ 600 ರೂಪಾಯಿಗಳವರೆಗೆ ನೀರು ಮಾರಾಟ ಮಾಡಿಕೊಂಡು ಹಣದ ಥೈಲಿ ತುಂಬಿಕೊಳ್ಳುತ್ತಿದ್ದಾರೆ. ಬಡವರು ನೀರು ಖರೀದಿಸಲು ಹಣವಿಲ್ಲದೆ ಹನಿ ನೀರಿಗೂ ಪರಿತಪಿಸಬೇಕಿದೆ.
ಸೋಸಿದ ಕೊಳೆ ನೀರು ಬಳಕೆ:
ವಿಜಯಪುರ ನಗರದ ಆಶ್ರಮ, ಬಿಎಲ್‍ಡಿಇ ಮತ್ತಿತರ ಬಡಾವಣೆಗಳಿಗೆ 12 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ. ಕೆಲ ಬಡಾವಣೆಗಳಿಗೆ 24*7 ಅಮೃತ ಯೋಜನೆ ಅಡಿ ನಲ್ಲಿಯ ಮೂಲಕ ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿತ್ತು. ಆದರೆ ಇದೀಗ ಅಲ್ಲಿಯೂ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಜನ ಜೀವನ ಅಸ್ತವ್ಯಸ್ತವಾಗಿದೆ. ಜನರು ಒಂದು ವಾರದ ನೀರನ್ನು ಸಂಗ್ರಹಿಸಿ ಇಟ್ಟು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಂಗ್ರಹಿಸಿ ಇಡಲಾದ ನೀರಿನಲ್ಲಿ ಹುಳುಗಳಾಗುತ್ತಿದ್ದು, ಜನರು ಈ ಕೊಳೆ ನೀರನ್ನು ಸೋಸಿ ಕುಡಿಯುವ ಪರಿಸ್ಥಿತಿ ಬಂದಿದೆ. ಇದರಿಂದಾಗಿ ಜನರ ಆರೋಗ್ಯದಲ್ಲಿ ಏರುಪೇರಾಗಿ ಅಜಾರಿ ಬೀಳುವಂತಾಗಿದೆ.

ಬಹಿರ್ದೆಸೆ, ಸ್ನಾನಕ್ಕೂ ನೀರಿಲ್ಲ:
ಬಹಿರ್ದೆಸೆ, ಸ್ನಾನಕ್ಕೂ ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ. ಒಂದು ವಾರ ನೀರಿಲ್ಲದೆ ಸ್ನಾನ ಮಾಡದೇ ಜನರು ಬರೀ ಕೈ, ಕಾಲು, ಮುಖ ತೊಳೆದುಕೊಂಡು ದಿನ ನೂಕುತ್ತಿದ್ದಾರೆ. ಹೊರಗಡೆ ಎಲ್ಲಿಯಾದರೂ ಬಹಿರ್ದೆಸೆ ಬಾಧೆ ನೀಗಿಸಿಕೊಳ್ಳುವಂತಾಗಿದೆ. ನೀರು ಪೂರೈಕೆಯಲ್ಲಿ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಅಧಿಕಾರಿಗಳ ಈ ವೈಫಲ್ಯದ ವಿರುದ್ಧ ಜನರು ಹಿಡಿ ಶಾಪ ಹಾಕುತ್ತಿದ್ದಾರೆ.
ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಭೀಕರವಾಗಿದ್ದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ನೀರಿನ ಸಮಸ್ಯೆ ನಿವಾರಣೆಗೆ ತಾಜಬಾವಡಿ ಸೇರಿದಂತೆ ನಗರದ ವಿವಿಧ ಬಾವಡಿಗಳನ್ನು ಸ್ವಚ್ಚ ಮಾಡಲಾಗಿದೆ. ಇದಕ್ಕೆ ಕೋಟ್ಯಂತರ ದುಡ್ಡೂ ವ್ಯಯ ಮಾಡಲಾಗಿದೆ.
ಆದರೆ ಅಧಿಕಾರಿಗಳು ಇಂಥ ಬಾವಡಿ ನೀರು ಇನ್ನೂ ಸದ್ಬಳಕೆ ಮಾಡದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್ ವ್ಯವಸ್ಥೆಯೂ ಇಲ್ಲ.
ನಗರದಲ್ಲಿ ಬೋರ್‍ವೆಲ್, ತೆರೆದ ಬಾವಿ ಮುಂತಾದ ನೀರಿನ ಮೂಲಗಳನ್ನು ಗುರುತಿಸಿ ಆಯಾ ಪ್ರದೇಶಗಳಲ್ಲಿ ಅ ಮೂಲಗಳಿಂದ ನೀರು ಪೂರೈಸಿ ತಕ್ಕ ಮಟ್ಟಿನ ಕ್ರಮವನ್ನಾದರೂ ಕೈಗೊಳ್ಳಬೇಕಾಗಿತ್ತು. ಆ ನಿಟ್ಟಿನಲ್ಲಿಯೂ ಅಧಿಕಾರಿಗಳು ಯಾವುದೇ ಕ್ರಮವನ್ನೂ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಜೂನ್‍ವರೆಗೆ ಜನರ ಗತಿ ಏನು?
ಬೇಸಿಗೆ ಆರಂಭದಲ್ಲಿಯೇ ವಿಜಯಪುರದಲ್ಲಿ ನೀರು ಪೂರೈಕೆ ಸ್ಥಿತಿ ಅಸ್ತವ್ಯಸ್ತವಾಗಿ ವಾರಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಈಗಲೇ ಈ ಪರಿಸ್ಥಿತಿ ಇದ್ದರೆ ಜೂನ್‍ವರೆಗೆ ಮತ್ತಷ್ಟು ಪರಿಸ್ಥಿತಿ ಬಿಗಡಾಯಿಸಿ ಜನರಿಗೆ ತಿಂಗಳು ಕಾದರೂ ಹನಿ ನೀರೂ ಸಿಗುವುದು ಕಷ್ಟ. ಹಾಗಾಗಿ ಅಧಿಕಾರಿಗಳು ಈಗಲೇ ಎಚ್ಚತ್ತುಕೊಂಡರೆ ಸಂಭವನೀಯ ನೀರಿನ ಸಮಸ್ಯೆಯಿಂದ ಜನರು ಬಚಾವ್ ಆಗಬಹುದಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಇಚ್ಚಾಶಕ್ತಿ ಪ್ರದರ್ಶಿಸುವರೆ? ಎಂದು ಕಾದು ನೋಡಬೇಕಷ್ಟೆ.

ಕ್ಯಾರೆ ಎನ್ನದ ಅಧಿಕಾರಿಗಳು

ನಗರದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಉಲ್ಬಣಿಸಿದರೂ ಅಧಿಕಾರಿಗಳು ಇತ್ತ ಕಡೆಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಪಾಲಿಕೆ ಆಯುಕ್ತರಿಗೆ ಕೇಳಿದರೆ ವಾಟರ್ ಬೋರ್ಡ್ ಎಂಜಿನಿಯರ್ ಕಡೆಗೆ ಬೆರಳು ಮಾಡಿ ತೋರಿಸುತ್ತಾರೆ. ವಾಟರ್ ಬೋರ್ಡ್ ಎಂಜಿನಿಯರ್ ರಾಮರಾವ್ ರಾಠೋಡ ಅವರು ಇನ್ನು ಐದು ದಿನ ನೀರು ಬಿಡಲು ಆಗಲ್ಲ. ಟ್ಯಾಂಕರ್ ವ್ಯವಸ್ಥೆಯನ್ನೂ ಮಾಡಲ್ಲ. ನೀರು ಬೇಕಿದ್ದರೆ ಖಾಸಗಿಯವರ ಬಳಿ ದುಡ್ಡು ಕೊಟ್ಟು ಖರೀದಿಸಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ಫೋನಾಯಿಸಿದರೂ ಫೋನ್ ರಿಸೀವ್ ಮಾಡುವುದಿಲ್ಲ. ವಾಟ್ಸಪ್ ಮೆಸ್ಸೇಜ್ ಹಾಕಿದರೂ ಡಿಸಿಯವರಿಂದ ರೆಸ್ಪಾನ್ಸ್ ಸಿಗುತ್ತಿಲ್ಲ. ಹಾಗಾಗಿ ಈಗ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಗಮನ ಹರಿಸುವರೆ? ಎಂದು ಜನರು ಕೇಳುವಂತಾಗಿದೆ.

ಸಾಹೇಬ್ರ… ನಗರದ ಆಶ್ರಮ ಸುತ್ತಮುತ್ತಲಿನ 7 ವಾರ್ಡ್‍ಗಳಿಗೆ ಬೂತನಾಳ ಕೆರೆಯಿಂದ ನೀರು ಪೂರೈಸಲಾಗುತ್ತಿತ್ತು. ಈಗ ಬೂತನಾಳ ಕೆರೆ ಬತ್ತಿದೆ. 12 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಹನಿ ನೀರಿಗಾಗಿ ಪರದಾಡುತ್ತಿದ್ದೇವೆ. ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು.
ನಂದಕಿಶೋರ ರಾಠೋಡ. ಜಿಲ್ಲಾ ವಿಕಾಸ ವೇದಿಕೆ ಉಪಾಧ್ಯಕ್ಷರು, ವಿಜಯಪುರ