ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಬಾಬಣ್ಣ ಕಲ್ಮನಿಯವರಿಗೆ  ಸನ್ಮಾನ


ಸಂಜೆವಾಣಿ ವಾರ್ತೆ
ಕುಕನೂರು., ಮಾ,29- ರಂಗಭೂಮಿಯ ಕಲೆಯನ್ನೇ ಕರಗತ ಮಾಡಿಕೊಂಡು.ಇಡೀ ಜೀವನವನ್ನೇ ರಂಗಭೂಮಿಗೆ ಮುಡುಪಾಗಿಟ್ಟ ಬಾಬಣ್ಣ ಕಲ್ಮನಿಯವರು ರಂಗಭೂಮಿಯನ್ನೆ ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ರಂಗ ಕಲಾವಿದ ಬಸವರಾಜ ಬಿನ್ನಾಳ ಹೇಳಿದರು.
ಪಟ್ಟಣದ ರಾಯರಡ್ಡಿ ಕಾಲೋನಿಯ  ನಿವಾಸಿ ಬಾಬಣ್ಣ ಕಲ್ಮನಿಯವರಿಗೆ ಗುಬ್ಬಿ ವೀರಣ್ಣ ಪ್ರಶಸ್ತಿ ಲಭಿಸಿದ ಕಾರಣ ತಾಲೂಕು ಕಸಾಪ ವತಿಯಿಂದ ಅವರನ್ನು ಸನ್ಮಾನಿಸಿ ಸೊಮವಾರ ಅವರು ಮಾತನಾಡಿದರು.ಬಾಬಣ್ಣ ಅವರು ಬಾಲ್ಯದಲ್ಲಿ ಬಣ್ಣದ ಬದುಕಿಗೆ ಕಾಲಿಟ್ಟಿದ್ದಾರೆ.ತಾಯಿ ರೆಹಮಾನಮ್ಮ ಅವರ ಜೊತೆ ಬಣ್ಣದ ಲೋಕದಲ್ಲಿ ಮಿನುಗಿದ ಅವರು ರಂಗಭೂಮಿಯ ರಾಜಕುಮಾರರಾಗಿ ಮಿಂಚಿದ್ದಾರೆ.ಸತತ 70 ವರ್ಷಗಳ ಕಾಲದಿಂದಲೂ ರಂಗಭೂಮಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಸರಕಾರ ತಡಮಾಡಿ ಗುರುತಿಸಿದೆ.ಅಲ್ಲದೇ ಇನ್ನಾದರೂ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಲಿ ಸರಕಾರ ಗಮನ ಹರಿಸಲಿ ಎಂದು ಒತ್ತಾಯಿಸಿದರು.
ಕಸಾಪ ಪ್ರಧಾನ ಕಾರ್ಯದರ್ಶಿ ಪೀರಸಾಬ ದಪೇದಾರ ಮಾತನಾಡಿ.ಬಾಬಣ್ಣ ಅವರು ರಂಗಭೂಮಿಯಲ್ಲಿ ಗಂಧದ ಕಟ್ಟಿಗೆಯಂತೆ ಜೀವ ಸವೆಸಿದ್ದಾರೆ ಅಂಥವರಿಗೆ ಈ ಪ್ರಶಸ್ತಿ ದೊರೆತಿರುವುದು ಅವರ ಸಾಧನೆಗೆ ಸಂದ ಗೌರವ ಎಂದರು.
ಕಸಾಪ ಅಧ್ಯಕ್ಷ ಕಳಕಪ್ಪ ಕುಂಬಾರ ಮಾತನಾಡಿ.ಕಲ್ಮನಿವರು ಕಲಾಜಗತ್ತಿನ ನಾಡಿನ ಸಂಪತ್ತು ಸಂಪತ್ತನ್ನು ಗೌರವ ದಿಂದ ಕಾಣಬೇಕು.ಮತ್ತು ಇವರ ಇಳಿವಯಸಿನ ಬದುಕಿಗೆ ಸರಕಾರ ಆಸರೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತ ಬಸವರಾಜ ಕೊಡ್ಲಿ.ಶಿಕ್ಷಕ ಉಮೇಶ ಕಂಬಳಿ ಶಿಕ್ಷಕ ಹನಮಂತಪ್ಪ ಉಪಸ್ಥಿತರಿದ್ದರು.