ಗುಬ್ಬಿಗಳ ಕಾಟಕ್ಕೆ ಬೇಸತ್ತ ದೇವದುರ್ಗದ ರೈತರು

ದೇವದುರ್ಗ.ಏ.೧೨- ತಾಲೂಕಿನ ರೈತರು ಹಿಂಗಾರಿನಲ್ಲಿ ಬಿತ್ತನೆ ಮಾಡಿದ ಸಜ್ಜೆ ಬೆಳೆಗಳಿಗೆ ಪಕ್ಷಿಗಳ ಕಾಟ ತಟ್ಟಿದೆ. ಸಮೃದ್ಧವಾಗಿ ಬೆಳೆದ ಸಜ್ಜೆ ಕಾಯಲು ಮನೆಯ ಮಂದಿ ಪಾಳೆಯ ಪ್ರಕಾರ ನಿಂತಿದ್ದು ಗುಬ್ಬಿ ಓಡಿಸುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ.
ಮುಂಗಾರು ಮಳೆ, ಕೃಷ್ಣಾ ನದಿ ಹಾಗೂ ನಾರಾಯಣಪುರ ಬಲದಂಡೆ ನಾಲೆ ನೀರು ಪಡೆದು ತಾಲೂಕಿನ ರೈತರು ಮೊದಲ ಬೆಳೆಗೆ ಭತ್ತ, ಹತ್ತಿ, ಸೂರ್ಯಕಾಂತಿ ಸೇರಿ ವಿವಿಧ ಬೆಳೆ ಬೆಳೆದಿದ್ದರು. ಬರಗಾಲ ಹಿನ್ನೆಲೆಯಲ್ಲಿ ಬಲದಂಡೆ ನಾಲೆಗೆ ಒಂದೇ ಬೆಳೆಗೆ ನೀರು ಹರಿಸಿ ಎರಡನೇ ಬೆಳೆಗೆ ನೀರು ಬಂದ್ ಮಾಡಲಾಗಿತ್ತು. ಬೋರ್‌ವೆಲ್, ಬಾವಿ, ಕೆರೆ ಹಾಗೂ ಕೃಷ್ಣಾನದಿ ದಂಡೆ ರೈತರು ಹಿಂಗಾರಿನಲ್ಲಿ ಸಜ್ಜೆ ಬೆಳೆದಿದ್ದಾರೆ.
ಹೈಬ್ರಿಡ್ ಸಜ್ಜೆ ಬೆಳೆಗೆ ಖರ್ಚು ಕಡಿಮೆ, ಇಳುವರಿ ಜಾಸ್ತಿ. ಹೀಗಾಗಿ ತಾಲೂಕಿನಲ್ಲಿ ಸುಮಾರು ಐದು ಸಾವಿರ ಹೆಕ್ಟೇರ್‌ನಲ್ಲಿ ಸಜ್ಜೆ ಬೆಳೆಯಲಾಗಿದೆ. ಬೆಳೆ ಸದ್ಯ ಕೈಗೆಬಂದಿದ್ದು ಗುಬ್ಬಿ, ಕಬ್ಬಕ್ಕಿ ಸೇರಿ ಪಕ್ಷಗಳ ಕಾಟ ಜಾಸ್ತಿಯಾಗಿದೆ. ಒಡೆಬಿಟ್ಟ ಸಜ್ಜೆ ಕಾಳಿನಲ್ಲಿ ಹಾಲಿನಾಂಶ ಹೆಚ್ಚಿರುವ ಕಾರಣ ಗುಬ್ಬಿ ಸೇರಿ ಸಣ್ಣಪುಟ್ಟ ಪಕ್ಷಿಗಳಿಗೆ ಉತ್ತಮ ಆಹಾರ. ಬರಹಿನ್ನೆಲೆಯಲ್ಲಿ ಬಹುತೇಕ ಕೃಷಿಭೂಮಿ ಬರುಡಾಗಿದೆ. ಪಕ್ಷಿಗಳು ಆಹಾರಕ್ಕಾಗಿ ಊರೂರು ಅಲೆಯುತ್ತಿವೆ. ಸಜ್ಜೆ, ಜೋಳ ಕಂಡಲ್ಲಿ ಹೊಸ್ತಿ ಮಾಡುತ್ತಿವೆ.
ಸಜ್ಜೆ ಬೆಳೆ ರೈತರಿಗೆ ಅಷ್ಟೇನು ಲಾಭ ತಂದುಕೊಡದಿದ್ದರೂ ಖರ್ಚು ಕಡಿಮೆ. ಹೈಬ್ರಿಡ್ ಸಜ್ಜೆ ಪಾಕೀಟ್ ೨೫೦ರಿಂದ ೫೦೦ರೂ. ಬೆಲೆಯಿದ್ದು ಬಿತ್ತನೆ ಮಾಡಲು ಸ್ವಲ್ಪ ಖರ್ಚು ಮಾಡಿದರೆ ಸಾಕು ಬೆಳೆ ಕೈಗೆಬರುತ್ತವೆ. ವಾರಕ್ಕೊಮ್ಮೆ ತೆಳುವಾಗಿ ನೀರು ಹರಿಸಿದರೆ ಸಮೃದ್ಧವಾಗಿ ಬೆಳೆ ಬರುತ್ತದೆ. ಸಜ್ಜೆಗೆ ಯಾವುದೇ ರೋಗಭಾದೆ ಇಲ್ಲದ ಕಾರಣ ಕ್ರಿಮಿನಾಶಕ, ಗೊಬ್ಬರ ಅಗತ್ಯವಿಲ್ಲ. ಅಲ್ಲದೆ ಸಜ್ಜೆ ಮನೆಯ ಆಹಾರಕ್ಕಾದರೆ ಮೇವು ದನಕರುಗಳಿಗೆ ಆಸರೆಯಾಗುತ್ತದೆ. ಹೀಗಾರಿ ರೈತರು ಸಜ್ಜೆ ಬೆಳೆಯ ಮೊರೆ ಹೋಗಿದ್ದಾರೆ.
ಸಜ್ಜೆ ಕಾಯಲು ರೈತರು ಜಮೀನಿನಲ್ಲೇ ಬೀಡುಬಿಟ್ಟಿದ್ದು ಗುಬ್ಬಿಗಳನ್ನು ಓಡಿಸುವುದು ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ಜಮೀನಿನ ಬದು, ನಡುವೆ ನಿಂತು ಕರ್ಕಶವಾಗಿ ಶಬ್ಧ ಮಾಡಿ ಓಡಿಸುತ್ತಾರೆ. ಇನ್ನು ಕೆಲವರು ಡಬ್ಬೆ, ಪ್ಲೇಟ್ ಬಾರಿಸಿದರೆ, ಕೆಲಯುವ ರೈತರು ತಂತ್ರಜ್ಞಾನದ ಮೊರೆಹೋಗಿ ಕರ್ಕಶವಾದ ಶಬ್ಧ ಆಡಿಯೋ ಹಾಕಿ ಪಕ್ಷಿಗಳನ್ನು ಓಡಿಸುತ್ತಿದ್ದಾರೆ. ಬೆಳಗ್ಗೆ, ಮಧ್ಯಾಹ್ನ, ಸಂಜೆಯಂತೆ ಮನೆಯವರೆಲ್ಲ ಗುಬ್ಬಿ ಓಡಿಸುತ್ತಿದ್ದಾರೆ.
ಒಟ್ಟಿನಲ್ಲಿ ರೈತರು ಬೆಳೆಗಾಗಿ ಹೋರಾಟ ಮಾಡಿದರೆ ಪಕ್ಷಿಗಳ ಆಹಾರಕ್ಕಾಗಿ ರೈತರ ಜತೆ ಹೋರಾಟಕ್ಕೆ ಇಳಿದಿವೆ.
೧೨ಡಿವಿಡಿ೧