ಗುಪ್ತಚರ ಮಾಹಿತಿ ಸೋರಿಕೆ ಟೀಕ್ಸಿರಾಗೆ ೧೫ ವರ್ಷ ಜೈಲು

ನ್ಯೂಯಾರ್ಕ್, ಏ.೧೫- ಪೆಂಟಗಾನ್ (ಅಮೆರಿಕಾ ಮಿಲಿಟರಿ ವಿಭಾಗ)ಗೆ ಸಂಬಂಧಿಸಿದ ಗೌಪ್ಯ ಗುಪ್ತಚರ ಮತ್ತು ರಕ್ಷಣಾ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ಬಂಧಿತ ಏರ್‌ಮ್ಯಾನ್ ಜ್ಯಾಕ್ ಟೀಕ್ಸೀರಾನನ್ನು ಬೋಸ್ಟನ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಪಡಿಸಲಾಗಿದೆ. ಟೀಕ್ಸೀರಾ ವಿರುದ್ಧ ಇದೀಗ ಅಧಿಕೃತವಾಗಿ ಪ್ರಕರಣ ದಾಖಲಿಸಲಾಗಿದೆ.
ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿಯ ಅನಧಿಕೃತ ಬಹಿರಂಗದ ಆರೋಪದ ಹಿನ್ನೆಲೆಯಲ್ಲಿ ಟೀಕ್ಸೀರಾಗೆ ೧೫ ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ. ಅದೂ ಅಲ್ಲದೆ ಅನಧಿಕೃತವಾಗಿ ತೆಗೆದುಹಾಕುವುದು ಮತ್ತು ವರ್ಗೀಕೃತ ದಾಖಲೆಗಳನ್ನು ಉಳಿಸಿಕೊಂಡ ಆರೋಪವೂ ಟೀಕ್ಸಿರಾ ಮೇಲೆ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೀಕ್ಸಿರಾ ಮೊದಲ ಆರೋಪಕ್ಕೆ ೧೦ ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸಲಿದ್ದು, ಬಳಿಕ ಎರಡನೆಯ ಪ್ರಕರಣದಲ್ಲಿ ಮತ್ತೆ ಐದು ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ. ಹೀಗೆ ೧೫ ವರ್ಷಗಳ ಜೈಲುಶಿಕ್ಷೆ ಎದುರಿಸುವ ಸಾಧ್ಯತೆ ಇದೆ. ಜ್ಯಾಕ್ ಟೀಕ್ಸಿರಾ (೨೧) ಅಮೆರಿಕಾ ಏರ್ ನ್ಯಾಶನಲ್ ಗಾರ್ಡ್ಸ್‌ಮೆನ್ ಆಗಿದ್ದು, ಆನ್‌ಲೈನ್ ಗೇಮಿಂಗ್ ಚಾಟ್‌ರೂಮ್‌ನಲ್ಲಿ ಫೈಲ್‌ಗಳನ್ನು ಹಂಚಿಕೊಂಡಿರುವ ಸಂಬಂಧಿಸಿದಂತೆ ಬೇಹುಗಾರಿಕೆ ಕಾಯಿದೆಯ ಆರೋಪದನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪಶ್ಚಿಮ ಕೇಪ್ ಕಾಡ್‌ವೈನಲ್ಲಿರುವ ಓಟಿಸ್ ಏರ್ ನ್ಯಾಶನಲ್ ಗಾರ್ಡ್ ಬೇಸ್‌ನಲ್ಲಿ ನೆಲೆಗೊಂಡಿರುವ ಮ್ಯಾಸಚೂಸೆಟ್ಸ್ ಏರ್ ನ್ಯಾಶನಲ್ ಗಾರ್ಡ್‌ನ ಗುಪ್ತಚರ ವಿಭಾಗದ ಸದಸ್ಯರಾಗಿ ಟೀಕ್ಸಿರಾ ಅವರನ್ನು ಪಟ್ಟಿ ಮಾಡಲಾಗಿತ್ತು. ಆದರೆ ಇದೀಗ ವರ್ಗೀಕೃತ ಮಿಲಿಟರಿ ಗುಪ್ತಚರ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದು, ಪ್ರಕರಣ ದಾಖಲಿಸಲಾಗಿದೆ. ಇನ್ನು ಟೀಕ್ಸಿರಾ ಸೋರಿಕೆ ಮಾಡಿರುವ ದಾಖಲೆಗಳು ಉಕ್ರೇನ್‌ನಲ್ಲಿನ ಯುದ್ಧ ಮತ್ತು ಮಿತ್ರರಾಷ್ಟ್ರಗಳ ಮೇಲೆ ಯುಎಸ್ ಬೇಹುಗಾರಿಕೆಯ ಬಗ್ಗೆ ಗುಪ್ತಮಾಹಿತಿ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದವು. ಮ್ಯಾಸಚೂಸೆಟ್ಸ್‌ನ ಡೈಟನ್‌ನಲ್ಲಿರುವ ಟೀಕ್ಸೀರಾ ಅವರ ಕುಟುಂಬದ ಮನೆಯಲ್ಲಿ ಅಧಿಕಾರಿಗಳು ಜ್ಯಾಕ್ ಟೀಕ್ಸೀರಾನನ್ನು ಬಂಧಿಸಲಾಗಿತ್ತು. ಬಂಧನ ವೇಳೆ ಎಫ್‌ಬಿಐ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.