ಗುದ್ನೇಶ್ವರ ಸ್ವಾಮಿಯ ಜಮೀನು ಉಳಿವಿಗಾಗಿ ಗ್ರಾಮಸ್ಥರು ಹೋರಾಟ


ಸಂಜೆವಾಣಿ ವಾರ್ತೆ
ಕೊಪ್ಪಳ/ಕುಕನೂರ: ಸಮೀಪದ ಗುದ್ನೇಶ್ವರಮಠ (ಗುದ್ನೇಪ್ಪನಮಠ) ಗ್ರಾಮದ ಸರ್ವೇ ನಂ 78 ರಲ್ಲಿ ಸರ್ಕಾರಿ ಕಟ್ಟಡ ಕಟ್ಟಲು ಅಥವಾ ಅನ್ಯ ಬಳಕೆಗೆ ಉಪಯೋಗಿಸಲು ಸರ್ಕಾರ ಮುಂದಾಗಿದ್ದು, ಇದನ್ನು ಮನಗಂಡ ಗುದ್ನೇಶ್ವರಮಠದ ಗ್ರಾಮಸ್ಥರು ಗುದ್ನೇಶ್ವರಮಠ ಧಾರ್ಮಿಕ ಕ್ಷೇತ್ರವಾಗಿದ್ದು, ಲಕ್ಷಾಂತರ ಭಕ್ತರು ಗುದ್ನೇಶ್ವರ ಜಾತ್ರೆಗೆ ಬರುವುದರಿಂದ ಭಕ್ತರಿಗೆ ತೊಂದರೆಯಾಗಲಿದೆ. ಭೂಮಿಯು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ್ದು ಇದನ್ನು ಸರ್ಕಾರಿ ಕಟ್ಟಡ ಕಟ್ಟಲು ಅಥವಾ ನಿರ್ಮಾಣ ಮಾಡಲೂ ಸರ್ಕಾರ ಮುಂದಾಗಿದೆ.
ಸರ್ಕಾರ ಈಗಾಗಲೇ ಸಾಕಷ್ಟು ಜಮೀನಿನಲ್ಲಿ ಜವಾಹರ್ ನವೋದಯ ವಿದ್ಯಾಲಯ, ಮೊರಾರ್ಜಿ ದೇಸಾಯಿ ಸ್ಕೂಲ್, ಕೆಎಲ್‍ಇ ಕಾಲೇಜು, ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪನೆ ಮಾಡಿದಲ್ಲದೇ, ಮತ್ತೇ ಅದೇ ಮಾರ್ಗದಲ್ಲಿ ತಹಶೀಲ್ದಾರ ಕಚೇರಿ ಸೇರಿದಂತೆ ಇನ್ನಿತರ ಕಚೇರಿಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ ಸರ್ಕಾರದ ಈ ಕ್ರಮಕ್ಕೆ ಯಲಬುರ್ಗಾ ಶಾಸಕರ ಒತ್ತಡವೇ ಕಾರಣ ಎನ್ನಲಾಗಿದೆ. ಸುಮಾರು 12ನೇ ಶತಮಾನದಲ್ಲಿ ಗುದ್ನೇಶ್ವರರು ಒಂದೇ ರಾತ್ರಿಯಲ್ಲಿ 101 ಕೂರಿಗಿ ಜಮೀನಿನಲ್ಲಿ ಹುಣಸೆಮರ ನಾಟಿ ಮಾಡಿ ಪ್ರಸಿದ್ಧ ಪಡೆದಿದ್ದರೂ ಹಳೆ ಸರ್ಕಾರ ಮತ್ತು ಹೊಸ ಸರ್ಕಾರಗಳು ಬಂದ ಮೇಲೆ ಅರ್ಧಕ್ಕೆ ಅರ್ಧ ಗುದ್ನೇಶ್ವರ ಸ್ವಾಮಿಯ ಭೂಮಿಯನ್ನ ಸರ್ಕಾರಿ ಕಟ್ಟಡ, ಶಾಲಾ-ಕಾಲೇಜು ಕಟ್ಟಿ ಹಾಳು ಮಾಡಿದೆ. ಅಲ್ಪ ಸ್ವಲ್ಪ ಉಳಿದುಕೊಂಡಿರುವ ಗುದ್ನೇಶ್ವರಮಠದ ಭೂಮಿಯಲ್ಲಿ ತಹಸೀಲ್ದಾರ ಕಚೇರಿ ಸೇರಿದಂತೆ ಎಲ್ಲ ಕುಕನೂರ ತಾಲ್ಲೂಕು ಕಚೇರಿಗಳನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ.
ಈಗಾಗಲೇ ಗುದ್ನೇಶ್ವರಮಠದಲ್ಲಿ ಭೂಮಿ ಅಳತೆ ಮಾಡಲು ಕದ್ದು ಮುಚ್ಚಿ ಅಧಿಕಾರಿಗಳು ಓಡಾಡುತ್ತಿದ್ದಾರೆ. ಕೊಪ್ಪಳ ಜಿಲ್ಲಾಡಳಿತ ಮತ್ತು ಸರ್ಕಾರದ ನಡೆಗೆ ಗುದ್ನೇಶ್ವರಮಠ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಸರ್ಕಾರಿ ಕಚೇರಿ ಮತ್ತು ಅನ್ಯ ಬಳಕೆಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಇದರ ಬದಲಾಗಿ ಕುಕನೂರಿನಲ್ಲಿ ತಾಲ್ಲೂಕಿನ ತಹಸೀಲ್ದಾರ ಕಚೇರಿ ಸೇರಿದಂತೆ ಎಲ್ಲ ಕಚೇರಿ ನಿರ್ಮಿಸಿಕೊಳ್ಳಲ್ಲಿ ಇದರಲ್ಲಿ ಗುದ್ನೇಶ್ವರಮಠ ಗ್ರಾಮಸ್ಥರ ಅಭ್ಯಂತರವಿಲ್ಲ. ಆದರೆ ಗುದ್ನೇಶ್ವರಮಠದ ಸರ್ವೇ ನಂ 78 ಸೇರಿದಂತೆ ಗುದ್ನೇಶ್ವರಮಠ ಸುತ್ತಮುತ್ತಲಿನಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಬಾರದು.
ಗುದ್ನೇಶ್ವರಮಠ ಧಾರ್ಮಿಕ ಕ್ಷೇತ್ರವಾಗಿದೆ. ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆ ದಿನ ಗುದ್ನೇಶ್ವರ ಜಾತ್ರೆ ನಡೆಯುತ್ತದೆ ಸುಮಾರು 2-3 ಲಕ್ಷ ಜನ ಜಾತ್ರೆಗೆ ಆಗಮಿಸುತ್ತಾರೆ ಇದರಿಂದ ಭಕ್ತರಿಗೆ ತೊಂದರೆಯಾಗುದಲ್ಲದೇ, ಗುದ್ನೇಶ್ವರಮಠ ಗ್ರಾಮದ ಜಮೀನು ಸಹ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದರಿಂದ ಸರ್ಕಾರಿ ಕಚೇರಿಗಳನ್ನು ಸ್ಥಾಪನೆ ಮಾಡಲು ಅವಕಾಶ ಮಾಡಿಕೊಡಬಾರದು ತಕ್ಷಣ ಗುದ್ನೇಶ್ವರಮಠದ ಜಮೀನಿನಲ್ಲಿ ಯಾವುದೇ ಅನ್ಯ ಬಳಕೆ ಅಥವಾ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಬಾರದು ಎಂದು ಕುಕನೂರ ತಾಲ್ಲೂಕಿನ ಗುದ್ನೇಶ್ವರಮಠ ಗ್ರಾಮಸ್ಥರ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಒಕ್ಕೊರಲ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಸಾನಿಧ್ಯ ಪ್ರಭುಲಿಂಗ ದೇವರು ಗುದ್ದೇಶ್ವರ ಮಠ, ತಿಪ್ಪೆರುದ್ರ ಸ್ವಾಮಿ ನೇತೃತ್ವ. ರುದ್ರಯ್ಯ ವಿರಪಣ್ಣವರ, ವೀರಯ್ಯ ದೇವಗಣಮಠ, ಗುದ್ನೆಯ್ಯ ಬಂಡಿ, ಚನ್ನಬಸಯ್ಯ ಪೂಜಾರ್, ಗುದ್ನೆಯ್ಯ ಓಲಿ, ಸಿದ್ದಲಿಂಗಯ್ಯ ಬಂಡಿ, ಜಗನ್ನಾಥ ಬೋವಿ, ರುದ್ರಯ್ಯ ಪೂಜಾರ, ರುದ್ರಯ್ಯ ಗಲಬಿ, ಶರಣಮ್ಮ ಇಂಗ್ಲಳ್ಳಿ, ಶಾಂತಮ್ಮ ಕಟಗಿ, ಚನ್ನಮ್ಮ ನಾಗಣ್ಣವರ, ಕಾಳಮ್ಮ ದೇವಗಣಮಠ, ಸಿದ್ದಿಂಗಮ್ಮ ಬಂಡಿ, ಶರಣಯ್ಯ ಹುಣಿಸಿಮರ, ಮಲ್ಲಯ್ಯ ಅಲಸಿನಮರ, ನಾಗಯ್ಯ ಕೊಪ್ಪಳ, ರೇವಣಸಿದ್ದಯ್ಯ ಕಟಗಿ, ಬಸಯ್ಯ ಮಠದ ಮತ್ತು ಗುದ್ದೇಪ್ಪನಮಠದ ಗ್ರಾಮಸ್ಥರು ಹಾಗೂ ಯುವಕರು ಉಪಸ್ಥಿತರಿದ್ದರು.