ಗುತ್ತೇದಾರರ ಪರ ಜಲ್ದಾರ್ ವಕಾಲತ್ತು – ಅಧಿಕಾರ ಕೊಟ್ಟಿದ್ದು ಯಾರು?

ಸಾಮಾನ್ಯ ಪ್ರಜೆಗೂ ಕಳಪೆ ಕಾಮಗಾರಿ ಪ್ರಶ್ನಿಸುವ ಹಕ್ಕಿದೆ
ರಾಯಚೂರು.ನ.14- ನಗರದಲ್ಲಿ ನಡೆದ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿದೆಂದು ಹೇಳುವ ಅಧಿಕಾರ ಬಿಜೆಪಿ ಮುಖಂಡ ರವೀಂದ್ರ ಜಲ್ದಾರ್ ಅವರಿಗೆ ಕೊಟ್ಟಿದ್ದು ಯಾರು? ಎಂದು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ನರಸಿಂಹಲು ಮಾಡಗಿರಿ ಅವರು, ಜಲ್ದಾರ್ ಅವರು ಗುತ್ತೇದಾರರ ಪರ ವಕಾಲತ್ತು ಮಾಡುವುದು ಸರಿಯಲ್ಲವೆಂದು ಹೇಳಿದ್ದಾರೆ.
ಅವರು ನಿನ್ನೆ ಅವರ ಸುದ್ದಿಗೋಷ್ಠಿಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಪೊಲೀಸ್ ಕಾಲೋನಿ ಕಲ್ಯಾಣ ಮಂಟಪದಿಂದ ಚಂದ್ರಬಂಡಾ ಸರ್ಕಲ್‌ವರೆಗೆ ರಸ್ತೆ ಮಾಡಲಾಗುತ್ತಿದೆ. ಎರಡು ಕಡೆ ಮಳೆ ನೀರು ಹರಿದು ಹೋಗಲು ಚರಂಡಿಗಳನ್ನು ಅರ್ಧಕ್ಕೆ ಕಟ್ಟಿದ್ದಾರೆ. ಅಲ್ಲದೇ, ಮನಸೋ ಇಚ್ಛೆ ಅಂದಾಜು ಪಟ್ಟಿ ಸಿದ್ಧಪಡಿಸಿ ಕೆಲಸ ಮಾಡುತ್ತಿರುವುದು ನಾವು ಆಕ್ಷೇಪಿಸಿದ್ದೇವೆ. ಅಲ್ಲದೇ, ಗುಣಮಟ್ಟದ ಬಗ್ಗೆಯೂ ಪ್ರಶ್ನಿಸಲಾಗಿದೆ.
ಆದರೆ, ರವೀಂದ್ರ ಜಲ್ದಾರ್ ಅವರು ಗುತ್ತೇದಾರರು ಗುಣಮಟ್ಟದಿಂದ ಕೆಲಸ ಮಾಡಿದ್ದಾರೆಂದು ಹೇಳುವುದು ನೋಡಿದರೇ, ಗುತ್ತೇದಾರರು, ಇಲಾಖೆ ಹಾಗೂ ಇನ್ನಿತರರು ಈ ಕಳಪೆ ಕಾಮಗಾರಿಯಲ್ಲಿ ಶಾಮೀಲಾಗಿದ್ದಾರೆಂದು ಎದ್ದು ಕಾಣುತ್ತದೆ. ಗುಣಮಟ್ಟದ ಪ್ರಮಾಣ ಪತ್ರ ನೀಡಲು ರವೀಂದ್ರ ಜಲ್ದಾರ್ ಅವರಿಗೆ ಅಧಿಕಾರ ಕೊಟ್ಟವರು ಯಾರು? ಮೂರನೇ ತಂಡದ ವರದಿ ಆಧಾರದ ಮೇಲೆ ಬಿಲ್ ಪಾವತಿಸುವುದು ನಮಗೂ ಗೊತ್ತಿದೆ.
ಮೂರನೇ ತಂಡದ ವರದಿಯೂ ಯಾವ ರೀತಿಯಲ್ಲಿ ಪಡೆಯುತ್ತಾರೆಂಬುವುದು ಗೊತ್ತಿಲ್ಲದ ಸಂಗತಿಯೇನಲ್ಲ. ಕಾಮಗಾರಿ ನಿರ್ವಹಿಸದೇ ಬಿಲ್ ಎತ್ತುವಳಿಯಾದ ಉದಾಹರಣೆಗಳು ಕೂಡ ಇವೆ ಎನ್ನುವುದು ಅವರು ಮರೆಯಬಾರದು. ಅಂತರಾಜ್ಯ ಸಂಪರ್ಕ ಕಲ್ಪಿಸುವ ಗದ್ವಾಲ್ ರಸ್ತೆ ಕಳೆದ ಅನೇಕ ವರ್ಷಗಳಿಂದ ರಸ್ತೆ ನಿರ್ಮಿಸುವ ಕಾರ್ಯ ನಿರಂತರ ನಡೆಯುತ್ತಿದೆ. ಈ ರಸ್ತೆಯಲ್ಲಿ ಗುಣಮಟ್ಟದಿಂದ ಕಾಮಗಾರಿ ನಿರ್ವಹಿಸಬೇಕೆಂಬುವುದು ನಮ್ಮ ಒತ್ತಾಯವಾಗಿದೆ.
3 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ರಸ್ತೆ ಕಾಮಗಾರಿ ಎರಡು ಬದಿಯಲ್ಲಿ ಮಳೆ ನೀರು ಚರಂಡಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ. ಚರಂಡಿ ನಿರ್ಮಾಣವಾಗದಿದ್ದಲ್ಲಿ, ಮಳೆಗಾಲದಲ್ಲಿ ಗುಡ್ಡದ ನೀರು ಭಾರೀ ಪ್ರಮಾಣದಲ್ಲಿ ಹರಿದು ಮತ್ತೇ ರಸ್ತೆ ಕೊಚ್ಚಿ ಹೋಗುತ್ತದೆ ಎನ್ನುವುದಕ್ಕೆ ಸಂಶಯವೇ ಬೇಡ. ಪ್ರತಿ ಎರಡು ವರ್ಷಕ್ಕೊಮ್ಮೆ ರಸ್ತೆ ನಿರ್ಮಾಣ ಕಾರ್ಯದಲ್ಲಿ ಗುತ್ತೇದಾರರ ಜೊತೆ ಶಾಮೀಲಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟು ಉಂಟು ಮಾಡಲಾಗುತ್ತದೆ.
ಕಾರಣ ರಸ್ತೆಯ ಎರಡು ಬದಿಗಳಲ್ಲಿ ರಸ್ತೆ ನಿರ್ಮಾಣ ಮಾಡುವವರೆಗೂ ಕಾಮಗಾರಿ ಪ್ರಾರಂಭಿಸಲು ಬಿಡುವುದಿಲ್ಲ. ಅವಶ್ಯಕತೆ ಬಿದ್ದರೇ, ನಗರಸಭೆಯಿಂದ ಹೋರಾಟ ಮಾಡಲು ಸಿದ್ಧವೆಂದಿದ್ದಾರೆ. ಲೋಕೋಪಯೋಗಿ ಇಲಾಖೆಯ ಹಿರಿಯ, ಕಿರಿಯ ಕಾರ್ಯ ನಿರ್ವಾಹಕ ಅಭಿಯಂತರರು ಒತ್ತಡಕ್ಕೆ ಮಣಿದು ಕಳಪೆ ಕಾಮಗಾರಿ ಕೈಗೊಂಡು ವರದಿ ನೀಡಿದ್ದಲ್ಲಿ ಅವರ ವಿರುದ್ಧ ಶಿಸ್ತು ಕ್ರಮಕ್ಕಾಗಿ ಕಾಂಗ್ರೆಸ್ ಚುನಾಯಿತ ಸದಸ್ಯರು ಉಗ್ರ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.
ಇಬ್ಬರು ಸದಸ್ಯರು ಬಿಜೆಪಿಗೆ ಕೈಕೊಟ್ಟರೆಂಬ ರವೀಂದ್ರ ಜಲ್ದಾರ್ ನಗು ಬರುತ್ತದೆ. ಆ ಇಬ್ಬರು ಸದಸ್ಯರು ನಮ್ಮ ಜೊತೆಯಲ್ಲಿದ್ದರು. ಹರೀಶ್ ನಾಡಗೌಡ ಕೊನೆ ಘಳಿಗೆಯಲ್ಲಿ ಕೈಕೊಟ್ಟು ಹೋದರೂ ಎಂದು ಹೇಳಿದ ಬಿಜೆಪಿ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡದೇ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಬಹುಮತ ಎಲ್ಲಿಂದ ಬಂತು?
ನಗರಸಭೆ ಅಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯದಲ್ಲಿ ಮೂಗು ತೂರಿಸುವ ಅಧಿಕಾರ ರವೀಂದ್ರ ಜಲ್ದಾರ್ ಅವರಿಗೆ ಇಲ್ಲ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷ ದೊಂಬರಾಟ ಮಾಡಿದೆ. ಕಾಂಗ್ರೆಸ್ಸಿನವರು ಮನೆ ಮನೆಗೆ ತೆರಳಿ, ಮತ ಕೇಳಿರುವುದು ಬಿಜೆಪಿಯವರೇ ಹೋರತೂ, ಕಾಂಗ್ರೆಸ್ಸಿಗರಲ್ಲ.
ಸಾಜೀದ್ ಸಮೀರ್ ಬರೆದುಕೊಟ್ಟ ಹೇಳಿಕೆ ಓದಿದ್ದಾರೆ ಎನ್ನುವ ಜಲ್ದಾರ್ ಅವರು ಕೂಡ ಇನ್ನೊಬ್ಬರು ಬರೆದುಕೊಟ್ಟಿದ್ದನ್ನೇ ಓದಿದ್ದಾರೆ ಎನ್ನುವುದು ನೆನಪಿಟ್ಟುಕೊಳ್ಳಬೇಕು. ಬಿಜೆಪಿಯಲ್ಲಿ ಮಹಿಳಾ ಸದಸ್ಯರಿದ್ದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ ಎನ್ನುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಶಶಿರಾಜ ಬಿಜೆಪಿ ಸದಸ್ಯರಲ್ಲವೇ? ಜಿಲ್ಲೆಯಲ್ಲಿ ಮಹಿಳೆಯರು, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಅಧಿಕಾರ ಚುಕ್ಕಾಣಿ ಹಿಡಿದಂತಹ ಘಟನೆಗಳಿಲ್ಲವೇ?
ಬಿಜೆಪಿ ಮುಖಂಡರಾದ ಸನ್ನಿ ರೋನಾಲ್ಡ್ ಅವರು ನಿನ್ನೆ ಪತ್ರಿಕೆ ಹೇಳಿ ನೀಡಿ, ಅಪೂರ್ಣಗೊಂಡ ರಸ್ತೆ ಕಾಮಗಾರಿಗೆ ಕಳಪೆಯಾಗಿದೆಂದು ಆರೋಪಿಸಲು ಇವರು ಯಾರು? ಎಂದು ನಮ್ಮನ್ನು ಪ್ರಶ್ನಿಸಿದ್ದಾರೆ. ಸರ್ಕಾರದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಶ್ನಿಸುವ ಅಧಿಕಾರ ಪ್ರತಿ ಸಾಮಾನ್ಯ ಪ್ರಜೆಗೂ ಇದೆ ಎನ್ನುವುದು ಅವರು ಅರಿತುಕೊಳ್ಳಬೇಕು.
ಜಿಲ್ಲಾ ಮಟ್ಟದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಜಾತ್ಯತೀತ ಜನತಾದಳ ಅಧ್ಯಕ್ಷರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಲು ಬೆಂಬಲಿಸಿದ್ದರಿಂದ ಹರೀಶ್ ನಾಡಗೌಡ ನಮ್ಮ ಜೊತೆ ಪ್ರವಾಸದಲ್ಲಿದ್ದರು. ನಾಡಗೌಡ ಅವರ ಮನೆಗೆ ಹೋಗಿ, ಬಿಜೆಪಿಯವರು ಹಣದ ಆಮೀಷವೊಡ್ಡಿದ್ದರಿಂದ ಕೊನೆಯಲ್ಲಿ ನಮಗೆ ಬಿಟ್ಟಿ, ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಿ ಮ ನೀಡಿದ್ದಾರೆಂದು ಪ್ರತಿಕ್ರಿಯಿಸಿದ್ದಾರೆ.