ಗುತ್ತಿದುರ್ಗ ಪ್ರೌಢಶಾಲೆಯಲ್ಲಿ ಎಲ್ ಸಿಡಿ ಕಳವು.

ಜಗಳೂರು.ಸೆ.೨೦; ತಾಲೂಕಿನ ಗುತ್ತಿದುರ್ಗ ಪ್ರೌಢ ಶಾಲೆಯಲ್ಲಿನ ಸ್ಮಾರ್ಟ್ ಕ್ಲಾಸ್ ನಡೆಸುವ 35 ಸಾವಿರ ಅಂದಾಜುಮೊತ್ತದ  ಎಲ್ ಸಿಡಿ ಪ್ರೊಜೆಕ್ಟರ್ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಉದ್ದೇಶದಿಂದ ಗುತ್ತಿದುರ್ಗ ಪ್ರೌಢಶಾಲೆಗೆ ಕಳೆದ 2018 ರಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ತೆಗೆದುಕೊಳ್ಳುವ ಸಂಬಂಧ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ಶಾಲೆಯಲ್ಲಿ ಎಲ್ ಸಿಡಿ ಪ್ರೊಜೆಕ್ಟರ್ ನ್ನ ಅಳವಡಿಕೆ ಮಾಡಲಾಗಿತ್ತು. ಸೆ.15 ರಂದು ಶಿಕ್ಷಕರು ಕ್ಲಾಸ್ ಮುಗಿಸಿಕೊಂಡು ಮನೆಗೆ ಮರಳಿದ ನಂತರ ಮರುದಿನ ಬೆಳಿಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಗೆ ಬಂದು ನೋಡಿದಾಗ ಎಲ್ ಸಿಡಿ ಪ್ರೊಜೆಕ್ಟರ್ ಕಳುವಾಗಿತ್ತು. ಬಳಿಕ ಶಾಲೆಯ ಪರಿಶೀಲನೆ ನಡೆಸಿದಾಗ ಕಳ್ಳರು ಶಾಲೆಯ 10ನೇ ತರಗತಿಯ ಬಾಗಿಲಿಗೆ ಅಳವಡಿಸಿದ್ದ ಚಿಲಕದ ಕೊಂಡಿ ಮುರಿದು ಒಳಗೆ ಬಂದಿದ್ದಾರೆ. ಬಳಿಕ ಗೋಡೆಗೆ ಅಳವಡಿಸಿದ್ದ ಎಲ್ ಸಿಡಿ ಪ್ರೊಜೆಕ್ಟರ್ ನ್ನ ಕದ್ದುಕೊಂಡು ಹೋಗಿದ್ದಾರೆ. ಈ ಬಗ್ಗೆ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯೆ ಶಿವಮ್ಮ ಅವರು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.