ಗುತ್ತಿಗೆದಾರ ಸಂತೋಷ್ ನಿವಾಸದಲ್ಲಿ ಕಂತೆ ಕಂತೆ ನೋಟು

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಅ.೧೫:ಆದಾಯ ತೆರಿಗೆ ಅಧಿಕಾರಿಗಳು ಗುತ್ತಿಗೆದಾರರನ್ನು ಗುರಿಯಾಗಿರಿಸಿಕೊಂಡು ನಡೆಸಿರುವ ದಾಳಿಯಲ್ಲಿ ಬಗೆದಷ್ಟು ಕಂತೆ ಕಂತೆ ಹಣ ಪತ್ತೆಯಾಗುತ್ತಿದೆ. ತಡರಾತ್ರಿ ರಾಜಾಜಿನಗರದ ಕೇತಮಾರನಹಳ್ಳಿಯಲ್ಲಿರುವ ಗುತ್ತಿಗೆದಾರ ಸಂತೋಷ್ ಕೃಷ್ಣಪ್ಪ ಅವರ ಅಪಾರ್ಟ್‌ಮೆಂಟ್ ಮೇಲೆ ನಡೆದ ದಾಳಿಯಲ್ಲಿ ೪೫ ಕೋಟಿ ರೂ. ಪತ್ತೆಯಾಗಿದೆ. ವಿಚಾರಣೆ ವೇಳೆ ಸಂತೋಷ್ ಅವರು ಕಾಂಗ್ರೆಸ್‌ನ ಮಾಜಿ ಎಂಎಲ್‌ಸಿ ಸಿ. ಕಾಂತರಾಜು ಅವರ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಇದೇ ವೇಳೆ ೩೨ ಬಾಕ್ಸ್‌ಗಳಲ್ಲಿ ೪೫ ಕೋಟಿ ರೂ. ಪತ್ತೆಯಾಗಿದೆ. ವಿಚಾರಣೆ ವೇಳೆ ಗುತ್ತಿಗೆದರ ಮಾಜಿ ಎಂಎಲ್‌ಸಿಯೊಬ್ಬರ ಹೆಸರನ್ನು ಬಾಯ್ಬಿಟ್ಟಿದ್ದು, ರಾಜಕೀಯ ನಾಯಕರಲ್ಲೂ ನಡುಕ ಉಂಟಾಗಿದೆ.
ತಡರಾತ್ರಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ವೇಳೆ ೪೫ ಕೋಟಿ ರೂ. ಪತ್ತೆ ಯಾಗಿದೆ. ೩೨ ಬಾಕ್ಸ್‌ಗಳಲ್ಲಿದ್ದ ಈ ಹಣವನ್ನು ಐಟಿ ಅಧಿಕಾರಿಗಳು ವ್ಯಾನ್‌ಗಳಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಇಡೀ ದಿನ ಅಪಾರ್ಟ್‌ಮೆಂಟ್‌ನ ೫ನೇ ಮಹಡಿಯ ಫ್ಲಾಟ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಪತ್ತೆಯಾಗಿದೆ. ಈ ಹಣ ಮಾಜಿ ವಿಧಾನ ಪರಿಷತ್ ಸದಸ್ಯರೊಬ್ಬರಿಗೆ ಸೇರಿದ್ದು ಎಂಬ ಮಾಹಿತಿಯೂ ಲಭ್ಯವಾಗಿದೆ.
ಗುತ್ತಿಗೆದಾರರನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಮಾಜಿ ಎಂಎಲ್‌ಸಿ ಕಾಂತರಾಜು ಹೆಸರನ್ನು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಪತ್ತೆಯಾಗಿರುವ ಹಣದ ಹೆಜ್ಜೆ ಜಾಡನ್ನು ಪತ್ತೆ ಮಾಡಲು ತನಿಖೆ ಕೈಗೊಂಡಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಪತ್ತೆಯಾಗುತ್ತಿದ್ದಂತೆ ೬ಕ್ಕೂ ಹೆಚ್ಚು ಕಾರುಗಳಲ್ಲಿ ೧೦ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಗುತ್ತಿಗೆದಾರರನ್ನು ವಿಚಾರಣೆಗೊಳಪಡಿಸಿ ಐಟಿ ಅಧಿಕಾರಿಗಳ ತಂಡ ವಾಪಸ್ ತೆರಳಿದೆ.
ಪಂಚ ರಾಜ್ಯಗಳ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೆ ಈ ರಾಜ್ಯಗಳಿಗೆ ಚುನಾವಣೆಗಾಗಿ ಫಂಡಿಂಗ್ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗುತ್ತಿದ್ದಂತೆ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಜ್ಯೂವೆಲರಿ ಮಾಲೀಕರು, ಉದ್ಯಮಿಗಳು ಹಾಗೂ ಗುತ್ತಿಗೆದಾರರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲೂ ೪೨ ಕೋಟಿ ರೂ. ೨೨ ಬಾಕ್ಸ್‌ಗಳಲ್ಲಿ ಪತ್ತೆಯಾಗಿದ್ದವು.

ಸಂತೋಷ್‌ಗೂ ನನಗೂ ಸಂಬಂಧವಿಲ್ಲ
ಗುತ್ತಿಗೆದಾರ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ ಐಟಿ ಅಧಿಕಾರಿಗಳ ದಾಳಿಯ ವೇಳೆ ಪತ್ತೆಯಾಗಿರುವ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಎಂಎಲ್‌ಸಿ ಕಾಂತರಾಜು ಸ್ಪಷ್ಟೀಕರಣ ಕೊಟ್ಟಿದ್ದಾರೆ.
ದಾಳಿ ಸಂದರ್ಭದಲ್ಲಿ ಗುತ್ತಿಗೆದಾರ ಸಂತೋಷ್ ಈ ಹಣ ತಮ್ಮದಲ್ಲ, ಕಾಂತರಾಜು ಅವರಿಗೆ ಸೇರಿದ್ದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಾಂತರಾಜು ಅವರು ಸ್ಪಷ್ಟೀಕರಣಕೊಟ್ಟಿದ್ದಾರೆ. ತಮಗೆ ಯಾವ ಅಧಿಕಾರಿಗಳು ಫೋನ್ ಮಾಡಿಲ್ಲ, ದಸರಾ ಹಬ್ಬದ ಪ್ರಯುಕ್ತ ತಾವು ನೆಲಮಂಗಲದ ಮನೆಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ. ಗುತ್ತಿಗೆದಾರ ಸಂತೋಷ್ ಯಾರೆಂದು ಗೊತ್ತಿಲ್ಲ. ತಮಗೆ ಸಹೋದರರು ಯಾರೂ ಇಲ್ಲ, ನಮ್ಮ ತಂದೆ-ತಾಯಿಗೆ ನಾನೊಬ್ಬನೇ ಮಗ, ಆದರೆ ಈ ಪ್ರಕರಣದಲ್ಲಿ ಅನಾವಶ್ಯಕವಾಗಿ ತಮ್ಮ ಹೆಸರನ್ನು ಥಳಕು ಹಾಕಲಾಗುತ್ತಿದೆ. ಯಾರು ಹೀಗೆ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದರು.