ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ; ಮಾಜಿ ಸಚಿವ ಈಶ್ವರಪ್ಪಗೆ ಕ್ಲೀನ್ ಚಿಟ್

ಬೆಂಗಳೂರು, ಜು. 20- ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ತನಿಖೆ ನಡೆಸಿದ್ದ ಉಡುಪಿ ಎಸ್‌ಪಿ, ಮಾಜಿ ಸಚಿವ ಈಶ್ವರಪ್ಪಗೆ ಕ್ಲೀನ್ ಚಿಟ್ ನೀಡಿದ್ದಾರೆ.
ಉಡುಪಿ ಎಸ್‌ಪಿ ವಿಷ್ಣುವರ್ಧನ್‌ ಅವರು ಜನಪ್ರತಿನಿಧಿಗಳ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ಯಾವುದೇ ಸಾಕ್ಷ್ಯಾಧಾರ ಲಭ್ಯವಾಗಿಲ್ಲ. ಅಸಲಿಗೆ ಈಶ್ವರಪ್ಪ-ಸಂತೋಷ್ ಮುಖಾಮುಖಿ ಭೇಟಿಯಾಗಿರಲಿಲ್ಲ ಎಂದು ಬಿ ರಿಪೋರ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಉದ್ದೇಶಪೂರ್ವಕವಾಗಿಯೇ ಸಚಿವ ಈಶ್ವರಪ್ಪ ಮನೆಯ ಬಳಿ ಸಂತೋಷ್ ಪಾಟೀಲ್ ಹೋಗಿ ನಿಲ್ತಿದ್ರು. ಹಣ ಕೇಳಿರುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಲಭ್ಯ ಆಗಿಲ್ಲ. ವಾಟ್ಸಪ್ ಚಾಟ್, ಆಡಿಯೋ ಸೇರಿ ಯಾವುದೇ ತಾಂತ್ರಿಕ ದಾಖಲೆಗಳು ಪತ್ತೆ ಆಗಿಲ್ಲ. ಕಾರ್ಯಕರ್ತರು ಯಾವ ರೀತಿ ಬಂದು ಹೋಗ್ತಿದ್ರೋ ಅದೇ ರೀತಿ ಸಂತೋಷ್ ಪಾಟೀಲ್ ಬಂದು ಹೋಗ್ತಿದ್ರು ಎಂದು ಬಿ ರಿಪೋರ್ಟ್‌ನಲ್ಲಿ ವರದಿ ಮಾಡಿದ್ದಾರೆ.
ಈಶ್ವರಪ್ಪ ವಿರುದ್ಧ ಲಂಚದ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಮಾಡಿ ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ಈಶ್ವರಪ್ಪ ತಲೆದಂಡ ಕೂಡ ಆಗಿತ್ತು. ಇತ್ತೀಚಿಗಷ್ಟೇ ರಾಜ್ಯಪಾಲರಿಗೆ ಪತ್ರ ಬರೆದಿದ್ದ ಸಂತೋಷ್ ಪಾಟೀಲ್ ಪತ್ನಿ, ಈಶ್ವರಪ್ಪ ಪ್ರಭಾವದ ಕಾರಣ ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸುತ್ತಿದ್ದಾರೆ. ಕೂಡಲೇ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು