ಗುತ್ತಿಗೆದಾರರ ಬೃಹತ್ ಪ್ರತಿಭಟನೆ

ಬೆಂಗಳೂರು,ಜ.೧೮-ಬಾಕಿ ಮೊತ್ತ ೨೫ ಸಾವಿರ ಕೋಟಿ ರೂ. ಬಿಡುಗಡೆ, ಜಿಎಸ್ ಟಿ ಗೊಂದಲ ಸೇರಿದಂತೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಇಂದು ಗುತ್ತಿಗೆದಾರರು ಧರಣಿ ನಡೆಸಿದರು.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಕರೆ ನೀಡಿದ್ದ ಧರಣಿಯಲ್ಲಿ ಗುತ್ತಿಗೆದಾರರು ಪಾಲ್ಗೊಂಡು ಗುತ್ತಿಗೆದಾರರ ಬಾಕಿ ಮೊತ್ತ ಬಿಡುಗಡೆ, ಭ್ರಷ್ಟಾಚಾರ ನಿಯಂತ್ರಣ, ಜಿಎಸ್ ಟಿ ಗೊಂದಲ, ಪ್ಯಾಕೇಜ್ ಪದ್ಧತಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಇತ್ತೀಚಿನ ವರ್ಷಗಳಲ್ಲಿ ಗುತ್ತಿಗೆದಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ನಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಸರಕಾರಗಳೂ ಸ್ಪಂದಿಸುತ್ತಿಲ್ಲ. ಪ್ರತೀ ಸರಕಾರಕ್ಕೂ ಮನವಿ ಸಲ್ಲಿಸುತ್ತಾ ನಮ್ಮ ಬೇಡಿಕೆಗಳಿಗೆ ಹಂತ ಹಂತವಾಗಿಯಾದರೂ ಸ್ಪಂದಿಸುವಂತೆ ಕೇಳಿಕೊಳ್ಳುತ್ತಿದ್ದರೂ ಸರಕಾರಗಳು ನಿರ್ಲಕ್ಷ್ಯ ಧೋರಣೆಯನ್ನು ಪ್ರದರ್ಶಿಸುತ್ತಿವೆ ಎಂದು ಧರಣಿ ನಿರತರು ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳಿಗೆ ನೂರಾರು ಪತ್ರಗಳನ್ನು ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಹೋರಾಟದ ನಡೆಸುವುದು ಅನಿವಾರ್ಯವಾಗಿದೆ. ನಮ್ಮ ಹೋರಾಟಕ್ಕೆ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳು ಮತ್ತು ತಾಲ್ಲೂಕು ಕೇಂದ್ರಗಳಲ್ಲಿಯೂ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಬೇಡಿಕೆಗಳು ಈಡೇರಿಸಲಾಗ ದಂತಹ ಸಮಸ್ಯೆಗಳೇನೂ ಇಲ್ಲ. ಪೂರ್ಣಗೊಳಿಸಿರುವ ಕಾಮಗಾರಿಗಳಿಗೆ ಬಾಕಿಮೊತ್ತ ಬಿಡುಗಡೆ ಮಾಡುವಂತೆ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದ ಅವರು, ಸ್ಥಳೀಯ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವಂತೆ ಆಗ್ರಹಿಸುವುದು, ಜಿಎಸ್ಟಿ ಗೊಂದಲವನ್ನು ಬಗೆಹರಿಸುವಂತೆ ಕೇಳುವುದೇ ತಪ್ಪೇ ಎಂದು ಪ್ರಶ್ನಿಸಿದರು.
ಈ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದರು. ಸಮಸ್ಯೆಗಳು ಮತ್ತು ಬೇಡಿಕೆಗಳಿಗೆ ಪರಿಹಾರ ರೂಪಿಸುವ ಭರವಸೆ ನೀಡಿದ್ದರು. ಆದರೆ ಇಂದಿಗೂ ಯಾವುದೇ ಪ್ರಯೋಜನವಾಗಿಲ್ಲ. ಅವರ ಭರವಸೆಗಳು ಕೇವಲ ಕಡತಗಳಲ್ಲಿ ಮಾತ್ರ ಉಳಿದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಗುತ್ತಿಗೆದಾರರಿಗೆ ವಿವಿಧ ಇಲಾಖೆಗಳಿಂದ ೨೫ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಬಿಡುಗಡೆಯಾಗಬೇಕಿದೆ. ಪ್ರಮುಖವಾಗಿ ಲೋಕೋಪಯೋಗಿ, ನೀರಾವರಿ, ಬಿಬಿಎಂಪಿಯಲ್ಲಿ ಅತಿ ಹೆಚ್ಚು ಕಾಮಗಾರಿಗಳು ನಡೆಯುತ್ತಿದ್ದು, ಪೂರ್ಣಗೊಂಡಿರುವ ಬಾಕಿ ಮೊತ್ತ ಸರಿ ಸುಮಾರ ೧೦ ಸಾವಿರ ಕೋಟಿ ರೂ. ಇದೆ. ಹೀಗಾಗಿ, ಸರಕಾರ ಗಂಭೀರ ಕ್ರಮ ಕೈಗೊಂಡು, ಗುತ್ತಿಗೆದಾರರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಮತ್ತೊಂದೆಡೆ ಕಾಮಗಾರಿಗಳ ಒಟ್ಟು ಮೊತ್ತವೂ ಶೇ.೩೦ರಿಂದ ೪೦ರಷ್ಟು ಹಣ ವಿವಿಧ ರೂಪದಲ್ಲಿ ಸೋರಿಕೆಯಾಗುತ್ತಿದ್ದು, ಬಹುತೇಕ ಹಣವನ್ನು ವಿವಿಧ ವೆಚ್ಚಗಳಿಗೆ ಹೊಂದಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ಸಂಘವೂ ಒಂದು ಪಕ್ಷದ ವಿರುದ್ಧ ಆಪಾದನೆ ಮಾಡುತ್ತಿಲ್ಲ. ವ್ಯವಸ್ಥೆಯ ಕುರಿತು ಪ್ರಶ್ನಿಸುತ್ತಿದ್ದು, ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಆಗ್ರಹಿಸಿದರು.
ಧರಣಿ ನೇತೃತ್ವವನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ, ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.