ಗುತ್ತಿಗೆದಾರರಿಂದ ಭ್ರಷ್ಟಾಚಾರ ಬಯಲು: ಬಿಜೆಪಿ ಸರ್ಕಾರ ವಜಾಕ್ಕೆ ಶರಣಪ್ರಕಾಶ್ ಪಾಟೀಲ್ ಆಗ್ರಹ

ಕಲಬುರಗಿ,ನ.23:ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಿದ್ದು, ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷರೇ ಶೇಕಡಾವಾರು ಲಂಚವನ್ನು ಜನಪ್ರತಿನಿಧಿಗಳಿಗೆ ಕೊಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಕೂಡಲೇ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರ ಡಾ. ಶರಣಪ್ರಕಾಶ್ ಪಾಟೀಲ್ ಅವರು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಚಪ್ಪ ಅವರು ಕಾಮಗಾರಿ ಕುರಿತು ಶೇಕಡಾವಾರು ಕಮೀಷನ್ ಪಡೆಯುತ್ತಿರುವ ಕುರಿತು ಅಂಕಿ, ಸಂಖ್ಯೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಸಚಿವರಿಗೆ, ಶಾಸಕರಿಗೆ ಮತ್ತಿತರರಿಗೆ ಶೇಕಡಾವಾರು ಹಣ ನೀಡುವ ಕುರಿತು ವಿವರಿಸಿದ್ದು ಈ ಕುರಿತು ತನಿಖೆ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಕಾಂಗ್ರೆಸ್ ವಿರುದ್ಧ ಶೇಕಡಾ 10ರಷ್ಟು ಕಮೀಷನ್ ಸರ್ಕಾರ ಎಂದು ಟೀಕಿಸಿದ್ದರು. ಈಗ ಗುತ್ತಿಗೆದಾರರು ಸಲ್ಲಿಸಿದ ದೂರಿನಲ್ಲಿ ಬಿಜೆಪಿ ಆಡಳಿತದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದ್ದಾರೆ. ಆ ಕುರಿತು ಪ್ರಧಾನಿಯವರು ಹೇಳಿಕೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ಶೀಘ್ರ ಕಾಂಗ್ರೆಸ್ ಪಕ್ಷದ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ, ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ನಿಗಾದಡಿಯಲ್ಲಿ ತನಿಖೆ ಕೈಗೊಳ್ಳುವಂತೆ ಹಾಗೂ ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟೀಲ್ ಅವರು ಖರ್ಗೆ ಲೂಟಿ ಗ್ಯಾಂಗ್ ಎಂಬ ಆರೋಪ ಮಾಡಿರುವುದನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶರಣಪ್ರಕಾಶ್ ಪಾಟೀಲ್ ಅವರು, ಬಿಜೆಪಿ ಭ್ರಷ್ಟಾಚಾರ ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಖರ್ಗೆಯವರ ಬದುಕು ತೆರೆದ ಪುಸ್ತಕದಂತಿದೆ. ಅವರ ಆಸ್ತಿ, ಪಾಸ್ತಿಯ ಕುರಿತು ಚುನಾವಣಾ ಸಂದರ್ಭದಲ್ಲಿ ಸಂಪೂರ್ಣ ಮಾಹಿತಿಯನ್ನು ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಬಿಟ್ ಕಾಯಿನ್ ದಂಧೆ ಕುರಿತು ರಾಜ್ಯ ಸರ್ಕಾರವು ದಾರಿ ತಪ್ಪಿಸುತ್ತಿದೆ. ಏನಾದರೂ ದಂಧೆಯಲ್ಲಿ ಕಾಂಗ್ರೆಸ್ಸಿಗರು ಭಾಗವಹಿಸಿದ್ದರೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ ಅವರು, ದಂಧೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ್ ಕಟಿಲ್ ಅವರ ಹೆಸರು ಕೇಳಿಬರುತ್ತಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಶರಣಬಸಪ್ಪ ದರ್ಶನಾಪೂರ್, ಶ್ರೀಮತಿ ಕನೀಜ್ ಫಾತಿಮಾ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ್, ಮುಖಂಡರಾದ ಸುಭಾಷ್ ರಾಠೋಡ್, ಶಿವಾನಂದ್ ಪಾಟೀಲ್, ಡಾ. ಕಿರಣ್ ದೇಶಮುಖ್, ನೀಲಕಂಠರಾವ್ ಮೂಲಗೆ, ಬಸವರಾಜ್ ಭೀಮಳ್ಳಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲತಾ ರವಿ ರಾಠೋಡ್ ಮುಂತಾದವರು ಉಪಸ್ಥಿತರಿದ್ದರು.