ಗುತ್ತಿಗೆದಾರನ ಮನೆಯಲ್ಲಿ ಕೋಟ್ಯಂತರ ರೂ. ಪತ್ತೆ

ಬೆಂಗಳೂರು,ಅ.೧೩-ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳಿಗೆ ರಾಜ್ಯದಿಂದ ಹಣವನ್ನು ಫಂಡಿಂಗ್ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿಯನ್ನಾಧರಿಸಿ ಆದಾಯ ತೆರಿಗೆ ಅಧಿಕಾರಿ(ಐಟಿ)ಗಳು ನಿನ್ನೆ ನಡೆಸಿದ್ದ ದಾಳಿ ಇಂದೂ ಮುಂದುವರೆದಿದ್ದು, ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಅವರ ಸಂಬಂಧಿ ಮನೆಯಲ್ಲಿ ೪೨ ಕೋಟಿ ರೂ. ನಗದು ಪತ್ತೆಯಾಗಿದೆ. ಬೆಂಗಳೂರಿನ ಮಾಜಿ ಕಾರ್ಪೋರೇಟರ್ ಅಶ್ವತ್ಥಮ್ಮ ಅವರ ಪತಿ ಹಾಗೂ ಬಿಜೆಪಿ ಸರ್ಕಾರವಿದ್ದಾಗ ಶೇ. ೪೦ ರಷ್ಟು ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರಲ್ಲಿ ಒಬ್ಬರಾದ ಅಂಬಿಕಾಪತಿ ಅವರಿಗೆ ಸೇರಿದ ಫ್ಲ್ಯಾಟ್‌ನಲ್ಲಿ ೪೨ ಕೋಟಿ ರೂ. ನಗದು ಹಣ ಪತ್ತೆಯಾಗಿದೆ.
ಈ ಹಣವನ್ನು ನೆರೆ ರಾಜ್ಯಕ್ಕೆ ಚುನಾವಣೆಗಾಗಿ ಸಾಗಿಸಲು ಸಂಗ್ರಹಿಸಿಡಲಾಗಿತ್ತು ಎಂದು ಹೇಳಲಾಗಿದೆ. ನಗರದ ಹಲವೆಡೆ ನಡೆಸಿದ ಇತಿಹಾಸದಲ್ಲಿಯೇ ಅತೀ ದೊಡ್ಡ ದಾಳಿಯಲ್ಲಿ ಬರೋಬ್ಬರಿ ೪೨ ಕೋಟಿ ರೂ. ನಗದು ಪತ್ತೆಯಾಗಿದೆ.
ಐಟಿ ದಾಳಿಯ ವೇಳೆ ಫ್ಲ್ಯಾಟ್ ಒಂದರ ಲಾಕ್ ಮಾಡಿದ್ದ ರೂಮಿನಲ್ಲಿದ್ದ ಮಂಚದ ಅಡಿಯಲ್ಲಿ ಪತ್ತೆಯಾಗಿರುವ ೪೨ ಕೋಟಿ ರೂ ನಗದು ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಇಲ್ಲಿಂದಲೇ ಹಣ ಪೂರೈಕೆಯಾಗುತ್ತಿದೆ ಎಂಬ ಅನುಮಾನಕ್ಕೆ ಪುಷ್ಟಿ ದೊರೆತಿದೆ.
ನಗರದಲ್ಲಿ ನಿನ್ನೆ ಮುಂಜಾನೆಯಿಂದ ತಡರಾತ್ರಿಯವರೆಗೆ ನಡೆಸಿದ ದಾಳಿ ಶೋಧ ಕಾರ್ಯಾಚರಣೆ ವೇಳೆ, ಬರೋಬ್ಬರಿ ೨೩ ರಟ್ಟಿನ ಬಾಕ್ಸ್‌ಗಳಲ್ಲಿ ಕಂತೆ ಕಂತೆ ಹಣ ಲಭ್ಯವಾಗಿತ್ತು. ಎಲ್ಲವೂ ೫೦೦ ಮುಖಬೆಲೆಯ ನೋಟಿನ ಕಂತೆಗಳಾಗಿದ್ದು, ಕಾರಿನಲ್ಲಿ ಹಣ ಸಾಗಿಸಲು ಸಿದ್ದಪಡಿಸಲಾಗಿತ್ತು.
ಖಾಲಿಯಿದ್ದ ಫ್ಲ್ಯಾಟ್:
ಕೋಟಿಗಟ್ಟಲೇ ಹಣ ದೊರೆತ ಖಾಲಿಯಿದ್ದ ಫ್ಲ್ಯಾಟ್ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿರುವ ಅಂಬಿಕಾಪತಿ ಅವರ ಪತ್ನಿ, ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ಅವರ ಸಂಬಂಧಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದ್ದು,ಈ ಸಂಬಂಧಿಸಿದಂತೆ ಹಲವರ ವಿಚಾರಣೆ ನಡೆಸಲಾಗಿದೆ.
ರಾಜ್ಯದಲ್ಲಿನ ಐಟಿ ದಾಳಿಗಳಲ್ಲಿ ಪತ್ತೆಯಾದ ಅತಿದೊಡ್ಡ ಮೊತ್ತದ ಹಣ ಇದಾಗಿದೆ. ಪಂಚರಾಜ್ಯಗಳ ಚುನಾವಣೆ ಘೋಷಣೆ ಬೆನ್ನಲ್ಲೆ ನಗರದಲ್ಲಿ ಪತ್ತೆಯಾದ ಭಾರಿ ಅಪಾರ ಪ್ರಮಾಣದ ಹಣದ ಹಿನ್ನೆಲೆಯಲ್ಲಿ, ಹಣ ಎಲ್ಲಿಗೆ ಸಾಗಿಸಲಾಗುತ್ತಿತ್ತು, ಯಾರಿಗೆ ಸೇರಿದ್ದು, ಎಲ್ಲಿಂದ ಬಂದಿತ್ತು ಅನ್ನುವ ಕುರಿತು ವಿಸ್ತೃತ ವಿಚಾರಣೆ ನಡೆಸಲಾಗುತ್ತಿದೆ.
ಆರ್‌ಟಿ ನಗರದಲ್ಲಿ ಪತ್ತೆ:
ನಿನ್ನೆ ಸಂಜೆ ೬ ಗಂಟೆಗೆ ಪೊಲೀಸ್ ಸಿಬ್ಬಂದಿಗಳ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ಏಕಕಾಲದಲ್ಲಿ ಆರ್‌ಟಿ ನಗರದ ಎರಡು ಸ್ಥಳಗಳಲ್ಲಿ ಹಾಗೂ ಆತ್ಮಾನಂದ ಕಾಲೋನಿಯ ಒಂದು ಫ್ಲ್ಯಾಟ್ ಮೇಲೆ ದಾಳಿ ಮಾಡಿದ್ದರು.
ದಾಳಿಯ ವೇಳೆ ದೊರೆತ ಹಣ ಹಾಗೂ ಕೆಲವರ ವಿಚಾರಣೆ ನಡೆಸುತ್ತಿರುವ ದೃಶ್ಯಾವಳಿಗಳನ್ನು ಅಧಿಕಾರಿಗಳು ಇಂಚಿಂಚೂ ರೆಕಾರ್ಡ್ ಮಾಡಿಕೊಂಡಿದ್ದಾರೆ. ಇದೇ ವೇಳೆ ವಾರ್ಡ್ ನಂ ೯೫ರ ಮಾಜಿ ಕಾರ್ಪೊರೇಟರ್ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಗಣೇಶ ಬ್ಲಾಕ್‌ನ ಅಶ್ವತಮ್ಮ ಹಾಗೂ ಆರ್.ಅಂಬಿಕಾಪತಿ ದಂಪತಿಗಳ ನಿವಾಸದ ಮೇಲೂ ದಾಳಿಯಾಗಿದೆ.
ರಾಜಸ್ಥಾನಕ್ಕೆ ಫಂಡಿಂಗ್:
ಮುಂಬರಲಿರುವ ಪಂಚ ರಾಜ್ಯಗಳ ಚುನಾವಣೆಗೆ ರಾಜಧಾನಿ ಬೆಂಗಳೂರು ಫಂಡಿಂಗ್ ಅಡ್ಡೆಯಾಗಿದೆ! ಇದೇ ಮಾಹಿತಿ ಅಧರಿಸಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಲಾಗಿದೆ.
ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ಐಟಿ ಇಲಾಖೆ ದಾಳಿ ಶುರು ಮಾಡಿದೆ. ಕಳೆದ ಬಾರಿಯ ದಾಳಿ ವೇಳೆ ಹಲವು ಮಾಹಿತಿಗಳು ಲಭ್ಯವಾಗಿದ್ದವು. ಅದನ್ನು ಅಧರಿಸಿ ಎರಡನೇ ಹಂತದ ದಾಳಿ ಆರಂಭಿಸಿದೆ. ರಾಜಸ್ಥಾನ ಚುನಾವಣೆಗೆ ರಾಜಧಾನಿಯಿಂದ ಅತ್ಯಧಿಕ ಫಂಡಿಂಗ್ ಆಗುತ್ತಿದೆ, ಅನೇಕ ಜ್ಯುವೆಲ್ಲರಿ ಶಾಪ್ ಮಾಲೀಕರು ಚುನಾವಣೆ ಪ್ರಚಾರಕ್ಕೆ ಹಣ ಒದಗಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಅದನ್ನನುಸರಿಸಿ ಐಟಿ ದಾಳಿ ಮಾಡಲಾಗಿದೆ.
ಕೀ ಕೊಡದೆ ಆಟ:
ಹಣ ಇದ್ದ ಈ ಮನೆಯ ಬಿಲ್ಡರ್ ಮನೆಯ ಕೀ ಕೊಡದೆ ಅಧಿಕಾರಿಗಳಿಗೆ ಆಟವಾಡಿಸಿದ್ದ. ಡ್ರೈವರ್ ಬಳಿಯಲ್ಲಿ ಕೀ ಕೊಟ್ಟು ಬೆಂಗಳೂರು ಬಿಡಲು ಹೇಳಿದ್ದ. ಕೊನೆಗೆ ಬಿಲ್ಡರ್ ಡ್ರೈವರ್ ಅನ್ನು ವಶಕ್ಕೆ ಪಡೆದು ಅಧಿಕಾರಿಗಳು ಕೀ ತೆಗೆದುಕೊಂಡಿದ್ದಾರೆ. ಸಂಜೆ ೭ ಗಂಟೆಗೆ ಮನೆಯ ಬೀಗ ತೆಗೆದು ಹಣವನ್ನು ಜಪ್ತಿ ಮಾಡಿದ್ದಾರೆ. ೪೨ ಕೋಟಿ ರೂ. ಹಣವನ್ನು ಜಪ್ತಿ ಮಾಡಿದ ಐಟಿ ಅಧಿಕಾರಿಗಳು ಹಣದ ದೃಶ್ಯಾವಳಿಯನ್ನು ಚಿತ್ರೀಕರಣ ಮಾಡಿಸಿ ಈಗಾಗಲೇ ಇಡಿ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.
ಅಕ್ರಮ ಹಣದ ವರ್ಗಾವಣೆ ಕೇಸ್‌ನಲ್ಲಿ ಪ್ರಕರಣ ದಾಖಲು ಮಾಡಲು ಇಡಿ ತಯಾರಿ ಮಾಡಿಕೊಳ್ಳುತ್ತಿದೆ. ಇದು ಯಾರಿಗೆ ಸೇರಿದ ಮನೆ ಎಂಬ ವಿವರ ಅಧಿಕಾರಿಗಳು ನೀಡಿಲ್ಲ. ಆದರೆ ಅನುಮಾನಗಳು ಅಧಿಕಾರದಲ್ಲಿರುವವರ ಆಪ್ತರ, ಗುತ್ತಿಗೆದಾರರ ಕಡೆಗೆ ಬೊಟ್ಟು ಮಾಡಿವೆ.
ಸಿಎಂ ಭೇಟಿ ಮಾಡಿದ್ದ:
ಅಪ್ತರಲ್ಲಿ ಆರ್. ಅಂಬಿಕಾಪತಿ ಗುತ್ತಿಗೆದಾರನಾಗಿದ್ದು,ಹಿಂದೆ ಆರ್‌ಆರ್ ನಗರ ಶಾಸಕ ಮುನಿರತ್ನ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದು ಕಳೆದ ಆ. ೮ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಅಂಬಿಕಾಪತಿ, ಗುತ್ತಿಗೆ ಕೆಲಸದ ಬಿಲ್ ಅನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.
ಅಂಬಿಕಾಪತಿ ವಿರುದ್ಧ ಆರ್‌ಆರ್ ನಗರ ಶಾಸಕ ಮುನಿರತ್ನ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಂಬಿಕಾಪತಿ, ಕೆಂಪಣ್ಣ ತಂಡದಲ್ಲಿದ್ದು, ಇಬ್ಬರ ಮೇಲೂ ಮಾನನಷ್ಟ ಮೊಕದ್ದಮೆ ಹೂಡಲಾಗಿತ್ತು.
ಹೇಮಂತ್ ಗೂ ಶಾಕ್ :
ನಿನ್ನೆ ಬಿಬಿಎಂಪಿ ಗುತ್ತಿಗೆದಾರ ಹೇಮಂತ್ ಮನೆ ಮೇಲೂ ಐಟಿ ದಾಳಿ ನಡೆದಿದೆ. ಬಿಲ್ ಪಾವತಿಗೆ ಸರ್ಕಾರ ಪರ್ಸೆಂಟೇಜ್ ಪಡೆಯುತ್ತಿದೆ ಎಂದು ಹೇಮಂತ್ ಆರೋಪ ಮಾಡಿದ್ದರು. ಇಂದು ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದಿದೆ. ಅಂಬಿಕಾಪತಿ ಹಾಗೂ ಗುತ್ತಿಗೆದಾರರ ಹೇಮಂತ್ ಒಂದೇ ತಂಡದವರಾಗಿದ್ದಾರೆ.

ಅಶ್ವತ್ಥಮ್ಮ ಅಂಬಿಕಾಪತಿ
ಆರ್‌ಟಿ ನಗರದ ಆನಂದ ಕಾಲೋನಿಯ ಅಶ್ವತ್ಥಮ್ಮ ಕಾಂಗ್ರೆಸ್ ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಹಿರಿಯ ಸಹೋದರಿಯಾಗಿದ್ದಾರೆ, ಕಳೆದ ೨೦೦೧ರಲ್ಲಿ ಕಾವಲ್ ಬೈರಸಂದ್ರ (ವಾರ್ಡ್. ನಂ.೯೫)ರ ಕಾರ್ಪೊರೇಟರ್ ಆಗಿದ್ದರು. ಇವರ ಪತಿ ಆರ್.ಅಂಬಿಕಾಪತಿ ಗುತ್ತಿಗೆದಾರರಾಗಿದ್ದು, ಕೆಂಪಣ್ಣ ಅವರ ಕಾಂಟ್ರಾಕ್ಟರ್ ಸಂಘದಲ್ಲಿ ಗುರುತಿಸಿಕೊಂಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರದ ಮೇಲೆ ರಾಜ್ಯದಲ್ಲಿ ನಡೆಯುವ ಕಾಮಗಾರಿಗೆ ಶೇ.೪೦ ನೀಡಬೇಕು, ಬಿಬಿಎಂಪಿಯಲ್ಲಿ ೫೦ ಪರ್ಸೆಂಟ್ ನೀಡಬೇಕು ಕೆಲವು ರಾಜಕೀಯ ವ್ಯಕ್ತಿಗಳ ವಿರುದ್ಧ ಆರೋಪ ಮಾಡಿದ್ದರು.ತನ್ನ ವಿರುದ್ಧ ಕಮೀಷನ್ ಆರೋಪ ಮಾಡಿದ ಬಿಜೆಪಿ ಶಾಸಕ ಮುನಿರತ್ನ ಅವರು ಅಂಬಿಕಾಪತಿ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. ಈ ಪ್ರಕರಣದಲ್ಲಿ ಅಂಬಿಕಾಪತಿ ವೈಯ್ಯಾಲಿಕಾವಲ್ ಠಾಣೆ ಪೊಲೀಸರಿಂದ ಬಂಧನಕ್ಕೊಳಗಾಗಿ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.
ಆರ್‌ಟಿ ನಗರದ ವೈಟ್ ಗೌಸ್‌ನಲ್ಲಿರುವ ಅಂಬಿಕಾಪತಿ ಮಗಳ ಮನೆ,ಮಾನ್ಯತಾ ಟೆಕ್ ಪಾರ್ಕ್ ಬಳಿಯ ಒಂದು ಮನೆ ಆರ್‌ಟಿ ನಗರದ ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.