ಗುತ್ತಿಗೆದಾರನಿಂದ 42 ಕೋಟಿ ರೂ.ಜಫ್ತಿ ವಿಚಾರಣೆಗೆ ಹಾಜರಾಗಲು ಸೂಚನೆ

ಗಳೂರು,ಅ.೧೪:ಆದಾಯ ತೆರಿಗೆ ಅಧಿಕಾರಿಗಳು ಬಿಬಿಎಂಪಿ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಇಂದು ಪರಿಶೀಲನೆ ನಡೆಸಿದ್ದಾರೆ. ಐಟಿ ದಾಳಿ ಸಂದರ್ಭದಲ್ಲಿ ನಿನ್ನೆ ೪೨ ಕೋಟಿ ರೂಗಳನ್ನು ಅಂಬಿಕಾಪತಿ ಮನೆ ಹಾಗೂ ಸಂಬಂಧಿಕರ ಮನೆಗಳಿಂದ ವಶಪಡಿಸಿಕೊಳ್ಳಲಾಯಿತು.
ನಿನ್ನೆ ಇಡೀ ರಾತ್ರಿ ಅಂಬಿಕಾಪತಿ ಅವರ ನಿವಾದಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು ಮನೆಯಲ್ಲಿದ್ದ ಲಾಕರ್‌ನ್ನು ತೆಗೆಸಿದ್ದು, ಲಾಕರ್‌ನಲ್ಲೂ ೨ ಸೂಟ್‌ಕೇಸ್‌ನಲ್ಲಿ ನಗದು ಅಪಾರ ಮೌಲ್ಯದ ಚಿನ್ನಾಭರಣ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಗುತ್ತಿಗೆದಾರರ ಮನೆಯಿಂದ ವಶಪಡಿಸಿಕೊಂಡ ೪೨ ಕೋಟಿ ರೂ.ಗಳನ್ನು ಐಟಿ ಅಧಿಕಾರಿಗಳು ಬ್ಯಾಂಕ್‌ನಲ್ಲಿ ಡೆಪಾಸಿಟ್ ಮಾಡಿದ್ದು, ಇಂದೂ ಸಹ ಶೋಧ ನಡೆಸಿದ್ದಾರೆ.
ಅಂಬಿಕಾಪತಿ ಮನೆಯಲ್ಲಿ ಪತ್ತೆಯಾದ ಹಣದ ಮೂಲದ ಬಗ್ಗೆ ಅಂಬಿಕಾಪತಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಹಣ ಎಲ್ಲಿಂದ ಬಂದಿದೆ. ಯಾರು ತಂದುಕೊಟ್ಟರು ಎಂಬ ಬಗ್ಗೆಯೂ ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಸೋಮವಾರ ವಿಚಾರಣೆಗೆ ಬರುವಂತೆ ಅಂಬಿಕಾಪತಿ ಮತ್ತು ಅವರ ಸಂಬಂಧಿಕರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
ಪಿತೃ ಪಕ್ಷ
ಐಟಿ ಅಧಿಕಾರಿಗಳು ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದರೂ ಅಂಬಿಕಾಪತಿ ಕುಟುಂಬಸ್ಥರು ಪಿತೃ ಪಕ್ಷದ ಕಾರ್ಯಕ್ಕೂ ಸಿದ್ಧತೆ ನಡೆಸಿದ್ದು, ಮನೆಯಲ್ಲಿ ತೋರಣ ಕಟ್ಟಿ ಪೂಜೆಗೆ ತಯಾರಿ ನಡೆಸಿದ್ದಾರೆ.
ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಬೆಂಗಳೂರಿನ ಚಿನ್ನಾಭರಣ ವ್ಯಾಪಾರಿಗಳೂ ಸೇರಿದಂತೆ ಹಲವು ವರ್ತಕರ ಹಾಗೂ ಗುತ್ತಿಗೆದಾರರ ಮನೆಯ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದರು. ರಾಜಸ್ತಾನ, ತೆಲಂಗಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಈ ಹಣವನ್ನು ಕಳುಹಿಸಲಾಗುತ್ತಿತ್ತು ಎಂಬ ಅನುಮಾನಗಳು ಇದ್ದು, ಎಲ್ಲದರ ಬಗ್ಗೆಯೂ ತನಿಖೆ ನಡೆದಿದೆ.

ಬಿಜೆಪಿಗೆ ಚುನಾವಣೆ ಅಸ್ತ್ರ
ಬಿಬಿಎಂಪಿ ಗುತ್ತಿಗೆದಾರನ ಮನೆಯಿಂದ ೪೨ ಕೋಟಿ ರೂ ಜಪ್ತಿ ಮಾಡಿದ ಪ್ರಕರಣವನ್ನು ಬಿಜೆಪಿ ಮುಂದಿನ ಚುನಾವಣೆಯಲ್ಲಿ ಬಳಸಿಕೊಳ್ಳಲು ನಿರ್ಧರಿಸಿದ್ದು, ಬಿಬಿಎಂಪಿ ಗುತ್ತಿಗೆದಾರನಾಗಿರುವ ಅಂಬಿಕಾಪತಿಯ ಪತ್ನಿ ಮಾಜಿ ಕಾರ್ಪೋರೇಟರ್ ಆಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಹಾಗಾಗಿ, ಈ ವಿಚಾರವನ್ನು ಮುಂದಿನ ಚುನಾವಣೆಯಲ್ಲಿ ಬಳಸಿ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟು ಮಾಡಲು ಬಿಜೆಪಿ ತಯಾರಿ ನಡೆಸಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಗುತ್ತಿಗೆದಾರರು ಮಾಡಿದ್ದ ಶೇ. ೪೦ ರಷ್ಟು ಕಮಿಷನ್ ಆರೋಪವನ್ನು ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಂಡು ಬಿಜೆಪಿಗೆ ಸಾಕಷ್ಟು ಮುಜುಗರ ಉಂಟು ಮಾಡಿತ್ತು. ಈಗ ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಗುತ್ತಿಗೆದಾರನ ಮನೆಯಲ್ಲಿ ಸಿಕ್ಕಿರುವ ಹಣದ ಮೂಲ ಯಾರದ್ದು? ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಚುನಾವಣಾ ವಿಚಾರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ.