ಗುಣ ಮಟ್ಟದ ಕೆಲಸ ಮಾಡಿ-ಡಾ. ವಿಶಾಲ್

ಕೋಲಾರ,ಜೂ,೨೪-ಅಂಕಿ ಅಂಶಗಳಿಗಾಗಿ ಕೆಲಸ ಮಾಡಬೇಡಿ ಗುಣ ಮಟ್ಟದ ಕೆಲಸ ಮಾಡ ಬೇಕೆಂದು ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಡಾ|| ವಿಶಾಲ್ ಆರ್, ಭಾ.ಆ.ಸೇ ಕಿವಿ ಮಾತು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು
ಜಿಲ್ಲೆಯಲ್ಲಿ ದುರಸ್ಥಿಗೊಳಪಟ್ಟಿರುವ ಕಟ್ಟಡಗಳ ಮಾಹಿತಿ ಪಡೆದು ಹೊಸದಾಗಿ ನಿರ್ಮಣಮಾಡಬೇಕಾದ ಶಾಲಾ ಕೊಠಡಿಗಳ ಕಾಮಗಾರಿಯನ್ನು ಶೀಘ್ರವಾಗಿ ಆರಂಭಗೊಳಿಸುವಂತೆ ಹಾಗೂ ಪೂರ್ಣಗೊಂಡಿರುವ ಹಂತದಲ್ಲಿರುವ ಕಟ್ಟಡಗಳ ಮಾಹಿತಿಯನ್ನು ಒದಗಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳಿಗೆ ಪಾಠದಷ್ಟೇ ಆಟವೂ ಮತ್ತು ಊಟವೂ ಮುಖ್ಯ. ಆದ್ದರಿಂದ ಶಾಲೆಯ ಆಟದ ಮೈದಾನ ಕಡಿಮೆ ಮಾಡಿ ಶಾಲಾ ಕೊಠಡಿಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಬದಲಿಗೆ ಮಹಡಿಯಲ್ಲಿ ಕೊಠಡಿಗಳನ್ನು ನಿರ್ಮಾಣ ಮಾಡುವ ಸಾದ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಎಂದರು.
ಶಾಲೆಗಳಲ್ಲಿ ಶೌಚಾಲಯ ಕಟ್ಟಡಗಳ ಬಗ್ಗೆ ಮಾಹಿತಿಯನ್ನು ಪಡೆದು ದುರಸ್ಥಿಗೊಳಪಟ್ಟಿರುವ ಶಾಲೆಗಳಿಗೆ ಹೊಸ ಶೌಚಾಲಯ ಕಟ್ಟಡಗಳು ನಿರ್ಮಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು ಶಾಲೆಗಳಲ್ಲಿ ಅಡಿಗೆಗೆ ಬಳಸಲು ಶುದ್ಧ ನೀರು, ಶೌಚಾಲಯ ಬಳಕೆ ನೀರು ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಿಚಾರಣೆ ಮಾಡಿ ಅಗತ್ಯವಿರುವ ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಿಸುವ ಬಗ್ಗೆ ಗ್ರಾಮಪಂಚಾಯ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಶಾಲೆಗಳಿಗೆ ಗುಣಮಟ್ಟದ ಆಹಾರಧಾನ್ಯಗಳು, ಅಗತ್ಯತೆಗೆ ತಕ್ಕ ಹಾಲಿನಪುಡಿ, ಸ್ಥಳೀಯವಾಗಿ ಪೂರೈಕೆಯಾಗುವ ತರಕಾರಿಗಳು ಸಂರ್ಪಕವಾಗಿ ಸರಬರಾಜಾಗುತ್ತಿವೆ ಎಂಬುದನ್ನು ಸಂಬಂಧಿತ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದರು
ಅಕ್ಷರ ದಾಸೋಹ ಅಡಿಯಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಉತ್ತಮವಾದ ಬಿಸಿ ಊಟದ ವ್ಯವಸ್ಥೆ ಮಾಡಬೇಕು ಹಾಗೂ ಯಾವುದೇ ಶಾಲೆಯಲ್ಲಿ ಅಡುಗೆ ಕೊಣೆಗಳ ಸಮಸ್ಯೆ ಹಾಗೂ ಅಡಿಗೆ ಮಾಡುವವರು ಮತ್ತು ಅಡಿಗೆ ಸಹಾಯಕರು ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಎಲ್ಲಾ ಶಾಲಾ ಮಕ್ಕಳಿಗೆ ಸರಿಯಾದ ಸಮಯಕ್ಕೆ ಪಠ್ಯಪುಸ್ತಕ, ಶೂಗಳು ಹಾಗೂ ಸಮವಸ್ತ್ರಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಹಾಗೂ ಮಕ್ಕಳ ಆರೋಗ್ಯ ತಪಾಸಣೆಯನ್ನು ಸರಿಯಾದ ಸಮಯಕ್ಕೆ ಮಾಡಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಎಸ್.ಯುಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಜಗದೀಶ್, ಸಾರ್ವಜನಿಕ ಶಿಕ್ಷಣ ಅಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಬಹುತೇಕ ಅಧಿಕಾರಿಗಳು ಉಪಸ್ಥಿತರಿದ್ದರು.